
ಮೊಹಾಲಿ: ನಾಯಕ ದೇವದತ್ತ ಪಡಿಕ್ಕಲ್ ಸೇರಿದಂತೆ ಮಧ್ಯಮಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಕಾಡಿತು. ಇದರಿಂದಾಗಿ ಪಂಜಾಬ್ ಎದುರು ಮೊದಲ ಇನಿಂಗ್ಸ್ ಮುನ್ನಡೆಗಾಗಿ ತಂಡವು ಕಠಿಣ ಹೋರಾಟ ನಡೆಸುವಂತಾಗಿದೆ.
ಪಂಜಾಬ್ ತಂಡವು ಗಳಿಸಿರುವ 309 ರನ್‌ಗಳಿಗೆ ಉತ್ತರವಾಗಿ ಎರಡನೇ ದಿನದಾಟದ ಮುಕ್ತಾಯಕ್ಕೆ ಕರ್ನಾಟಕವು 87 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 255 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆಗೆ ಇನ್ನೂ 54 ರನ್‌ಗಳು ಬೇಕು.
ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 42; 124ಎ, 4X3) ಮಧ್ಯಮವೇಗಿ ಆಲ್‌ರೌಂಡರ್ ವಿದ್ಯಾಧರ್ ಪಾಟೀಲ (ಬ್ಯಾಟಿಂಗ್ 23; 56ಎ, 4X4) ಕ್ರೀಸ್‌ನಲ್ಲಿದ್ದಾರೆ. ಅವರಿಬ್ಬರ ಮೇಲೆಯೇ ಈಗ ಕರ್ನಾಟಕ ತಂಡಕ್ಕೆ ಇನಿಂಗ್ಸ್ ಮುನ್ನಡೆ ಕೊಡಿಸುವ ಹೊಣೆ ಇದೆ. ಈ ಪಂದ್ಯದಲ್ಲಿ ಪೂರ್ಣ ಅಂಕಗಳೊಂದಿಗೆ ಗೆದ್ದರೆ ಮಾತ್ರ ಕರ್ನಾಟಕ ತಂಡಕ್ಕೆ ನಾಕೌಟ್ ಪ್ರವೇಶಿಸುವ ಅವಕಾಶ ಸಿಗಬಹುದು.
ಆರಂಭಿಕ ಜೋಡಿ ಕೆ.ಎಲ್. ರಾಹುಲ್ (59; 87ಎ, 4X9) ಮತ್ತು ಮಯಂಕ್ ಅಗರವಾಲ್ (46; 64ಎ, 4X6) ಮೊದಲ ವಿಕೆಟ್ ಜೊತೆಯಾಟದಲ್ಲಿ 102 ರನ್ ಸೇರಿಸಿದರು. ಈ ಉತ್ತಮ ಅಡಿಪಾಯದ ಮೇಲೆ ಚೆಂದದ ಇನಿಂಗ್ಸ್ ಕಟ್ಟುವ ಅವಕಾಶವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದರು. ಎಡಗೈ ಸ್ಪಿನ್ನರ್ ಹರಪ್ರೀತ್ ಬ್ರಾರ್ (101ಕ್ಕೆ4) ಅವರ ಮೋಡಿಗೆ ವಿಕೆಟ್ ಪತನವಾದವು.
ಮೊದಲ ದಿನದಾಟದಲ್ಲಿ ಪಂಜಾಬ್ ತಂಡವು 8 ವಿಕೆಟ್‌ಗಳಿಗೆ 303 ರನ್ ಗಳಿಸಿತ್ತು. ಅರ್ಧಶತಕ ಗಳಿಸಿದ್ದ ಇಮಾನ್ಜೋತ್ ಸಿಂಗ್ (83) ಹಾಗೂ ಸುಖದೀಪ್ ಭಜ್ವಾ (20ರನ್) ಕ್ರೀಸ್‌ನಲ್ಲಿದ್ದರು. ಶುಕ್ರವಾರ ಬೆಳಿಗ್ಗೆ ಈ ಮೊತ್ತಕ್ಕೆ ಕೇವಲ ಆರು ರನ್ ಸೇರಿಸಿದ ಬ್ಯಾಟರ್‌ಗಳು ಔಟಾದರು. ವಿದ್ಯಾಧರ್ ಪಾಟೀಲ ಅವರು ಇಮಾನ್ಜೋತ್ ಅವರನ್ನು ಔಟ್ ಮಾಡಿದರೆ, ಪ್ರಸಿದ್ಧ ಕೃಷ್ಣ ಅವರು ಭಜ್ವಾ ವಿಕೆಟ್ ಪಡೆದರು.
ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಅನುಭವಿ ಜೋಡಿ ರಾಹುಲ್ ಮತ್ತು ಮಯಂಕ್ ಕರ್ನಾಟಕ ತಂಡಕ್ಕೆ ಅಮೋಘ ಆರಂಭ ನೀಡಿದರು.
ಆದರೆ 22ನೇ ಓವರ್‌ನಲ್ಲಿ ಚಾಹಲ್ ಅವರು ಮಯಂಕ್ ವಿಕೆಟ್ ಗಳಿಸುವ ಮೂಲಕ ಜೊತೆಯಾಟ ಮುರಿದರು. ಐದು ಓವರ್‌ಗಳ ನಂತರ ಬ್ರಾರ್ ಬೌಲಿಂಗ್‌ನಲ್ಲಿ ರಾಹುಲ್ ಕ್ಲೀನ್‌ಬೌಲ್ಡ್ ಆದರು. ಕಳೆದ ಪಂದ್ಯದಲ್ಲಿ ಚೆಂದದ ಬ್ಯಾಟಿಂಗ್ ಮಾಡಿದ್ದ ಕೆ.ವಿ.ಅನೀಶ್ (32; 75ಎ, 4X3) ಇಲ್ಲಿಯೂ ಭರವಸೆ ಮೂಡಿಸಿದ್ದರು. ಆದರೆ ದೇವದತ್ತ ಮತ್ತು ಸ್ಮರಣ್ ರವಿಚಂದ್ರನ್ ತಲಾ 9 ರನ್ ಗಳಿಸಿದರು. ಇಬ್ಬರ ವಿಕೆಟ್ ಕೂಡ ಬ್ರಾರ್ ಖಾತೆ ಸೇರಿದವು. 48ನೆ ಓವರ್‌ನಲ್ಲಿ ಅನೀಶ್ ವಿಕೆಟ್ ಕೂಡ ಬ್ರಾರ್ ಪಾಲಾಯಿತು.
ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಮತ್ತು ಪದಾರ್ಪಣೆ ಪಂದ್ಯ ಆಡುತ್ತಿರುವ ಕೃತಿಕ್ ಕೃಷ್ಣ (28; 83ಎ, 4X2, 6X1) ಅವರು ಆರನೇ ವಿಕೆಟ್ ಜೊತೆಯಾಟದಲ್ಲಿ 153 ಎಸೆತಗಳಲ್ಲಿ 47 ರನ್ ಸೇರಿಸಿದರು. ಸುಖದೀಪ್ ಬೀಸಿದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೃತಿಕ್ ಬಿದ್ದರು. ಆದರೆ, ಶ್ರೇಯಸ್ ಅವರೊಂದಿಗೆ ಸೇರಿಕೊಂಡ ರಾಯಚೂರಿನ ವಿದ್ಯಾಧರ್ ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಇದರಿಂದಾಗಿ ಇನ್ನೂ ಆಸೆ ಜೀವಂತವಾಗಿದೆ.
ಪಂಜಾಬ್: 92 ಓವರ್‌ಗಳಲ್ಲಿ 309 (ಇಮಾನ್ಜೋತ್ ಸಿಂಗ್ ಚಾಹಲ್ 83, ಆಯುಷ್ ಗೋಯಲ್ 23, ಸುಖದೀಪ್ ಭಜ್ವಾ 20, ವಿದ್ಯಾಧರ್ ಪಾಟೀಲ 52ಕ್ಕೆ4, ಮೊಹ್ಸಿನ್ ಖಾನ್ 85ಕ್ಕೆ2, ಶ್ರೇಯಸ್ ಗೋಪಾಲ್ 48ಕ್ಕೆ3)
ಕರ್ನಾಟಕ: 87 ಓವರ್‌ಗಳಲ್ಲಿ 6ಕ್ಕೆ255 (ಕೆ.ಎಲ್. ರಾಹುಲ್ 59, ಮಯಂಕ್ ಅಗರವಾಲ್ 46, ಕೆ.ವಿ. ಅನೀಶ್ 32, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 42, ಕೃತಿಕ್ ಕೃಷ್ಣ 28, ವಿದ್ಯಾಧರ್ ಪಾಟೀಲ ಬ್ಯಾಟಿಂಗ್ 23, ಹರಪ್ರೀತ್ ಬ್ರಾರ್ 101ಕ್ಕೆ4, ಸುಖದೀಪ್ ಭಜ್ವಾ 22ಕ್ಕೆ1, ಇಮಾನ್ಜೋತ್ ಸಿಂಗ್ ಚಾಹಲ್ 60ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.