ADVERTISEMENT

ರಣಜಿ ಕ್ರಿಕೆಟ್ | ಸರ್ಫರಾಜ್ ಖಾನ್ ತ್ರಿಶತಕ: ಮುಂಬೈ–ಉತ್ತರ ಪ್ರದೇಶ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 14:34 IST
Last Updated 22 ಜನವರಿ 2020, 14:34 IST
   

ಮುಂಬೈ:ಉತ್ತರ ಪ್ರದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿಕಲೆಹಾಕಿದ್ದ ಬೃಹತ್‌ ಮೊತ್ತದೆದುರು ದಿಟ್ಟ ಆಟವಾಡಿದ ಮುಂಬೈ, ರಣಜಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಈ ಪಂದ್ಯದಲ್ಲಿ ಅಜೇಯ ತ್ರಿಶತಕ ಗಳಿಸಿದ ಸರ್ಫರಾಜ್‌ ಖಾನ್‌ ತಮ್ಮ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ಪ್ರದೇಶ ತಂಡಉಪೇಂದ್ರ ಯಾದವ್‌ (203) ದ್ವಿಶತಕ ಮತ್ತು ಆಕಾಶ್‌ದೀಪ್‌ ನಾಥ್‌ (115) ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 625 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್‌ ನಡೆಸಿದ ಮುಂಬೈಗೆ ಉತ್ತಮಆರಂಭ ಸಿಗಲಿಲ್ಲ. ಕೇವಲ 16 ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಪತನವಾದವು.

ಒಂದು ಹಂತದಲ್ಲಿ 124 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಮುಂಬೈ, ಫಾಲೋಆನ್‌ ಭೀತಿಗೊಳಗಾಗಿತ್ತು. ಈ ವೇಳೆ ಕ್ರೀಸ್‌ಗಿಳಿದ ಸರ್ಫರಾಜ್‌ ಖಾನ್‌ ಮೂರು ಚೆಂದದ ಜೊತೆಯಾಟಗಳಲ್ಲಿ ಭಾಗಿಯಾದರು. ಸಿದ್ದೇಶ್ ಲಾಡ್‌ (98) ಜೊತೆ ಸೇರಿ ಐದನೇ ವಿಕೆಟ್‌ಗೆ210 ರನ್‌ ಕೂಡಿಸಿದ ಅವರು, ನಾಯಕ ಆದಿತ್ಯ ತಾರೆ (97) ಜೊತೆ ಆರನೇ ವಿಕೆಟ್‌ಗೆ 179 ರನ್‌ ಮತ್ತು ಶ್ಯಾಮ್ಸ್‌ ಮಲಾನಿ (65) ಜೊತೆ ಏಳನೇ ವಿಕೆಟ್‌ಗೆ 150 ರನ್‌ ಕೂಡಿಸಿದರು.

ADVERTISEMENT

ಒಟ್ಟು 391 ಎಸೆತಗಳನ್ನು ಎದುರಿದ ಸರ್ಫರಾಜ್‌, 30 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ಸಹಿತ 301 ರನ್‌ ಗಳಿಸಿ ಆಜೇಯರಾಗಿ ಉಳಿದರು. ಮುಂಬೈ ಪರ ಆಡುವ ಮೊದಲು ಸರ್ಫರಾಜ್‌ ಉತ್ತರ ಪ್ರದೇಶ ತಂಡಕ್ಕೆ ಆಡುತ್ತಿದ್ದರು ಎಂಬುದು ವಿಶೇಷ. 2015ರಲ್ಲಿ ಮುಂಬೈ ವಿರುದ್ಧ 44 ರನ್‌ ಗಳಿಸಿದ್ದರು.

ಮುಂಬೈ ಪರ ಇದುವರೆಗೆ ಒಟ್ಟು ಎಂಟು ತ್ರಿಶತಕಗಳು ದಾಖಲಾಗಿವೆ. ಈ ಹಿಂದೆ ಸುನೀಲ್‌ ಗವಾಸ್ಕರ್‌, ಸಂಜಯ್‌ ಮಂಜ್ರೇಕರ್‌, ವಾಸೀಂ ಜಾಫರ್‌ (ಎರಡು ಬಾರಿ), ರೋಹಿತ್‌ ಶರ್ಮಾ, ವಿಜಯ್‌ ಮರ್ಚೆಂಟ್‌ ಹಾಗೂ ಅಜಿತ್‌ ವಾಡೇಕರ್‌ಈ ಸಾಧನೆ ಮಾಡಿದ್ದರು.

ಸ್ಕೋರ್‌ ವಿವರ
ಉತ್ತರ ಪ್ರದೇಶ:625-8 (159.3)

ಉಪೇಂದ್ರ ಯಾದವ್‌ 203 ಔಟಾಗದೆ
ಆಕಾಶ್‌ದೀಪ್‌ ನಾಥ್‌ 115
ರಾಯ್‌ಸ್ಟನ್‌ ದಿಯಾಸ್‌ 103ಕ್ಕೆ 3 ವಿಕೆಟ್ಟ
ಆಕಾಶ್‌ ಪಾರ್ಕರ್‌ 108ಕ್ಕೆ 2 ವಿಕೆಟ್‌
ತುಷಾರ್ ದೇಶಪಾಂಡೆ 135ಕ್ಕೆ 2 ವಿಕೆಟ್‌

ಮುಂಬೈ:688-7 (166.3)
ಸರ್ಫರಾಜ್‌ ಖಾನ್‌301 ಔಟಾಗದೆ
ಸಿದ್ದೇಶ್ ಲಾಡ್‌ 98
ಆದಿತ್ಯ ತಾರೆ 97
ಅಂಕಿತ್ ರಜಪೂತ್‌ 133ಕ್ಕೆ 3 ವಿಕೆಟ್‌
ಮೊಹಮ್ಮದ್‌ ಸೈಫ್‌ 54ಕ್ಕೆ 2 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.