ADVERTISEMENT

ರಣಜಿ: ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಂಡ ‘ಬಾಲ್ ಬಾಯ್‌’ಗಳು

ಜಿ.ಶಿವಕುಮಾರ
Published 27 ಅಕ್ಟೋಬರ್ 2025, 6:20 IST
Last Updated 27 ಅಕ್ಟೋಬರ್ 2025, 6:20 IST
ಕರ್ನಾಟಕ ಹಾಗೂ ಗೋವಾ ತಂಡಗಳ ನಡುವಣ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲ್‌ ಬಾಯ್‌ಗಳು ‌ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 
ಕರ್ನಾಟಕ ಹಾಗೂ ಗೋವಾ ತಂಡಗಳ ನಡುವಣ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲ್‌ ಬಾಯ್‌ಗಳು ‌ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.    

ಶಿವಮೊಗ್ಗ: ‘ಅದು 1987ರ ವಿಶ್ವಕಪ್‌ ಸಮಯ. ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದ ಆ ಟೂರ್ನಿಯ ಕೆಲ ಪಂದ್ಯಗಳು ಮುಂಬೈನಲ್ಲೂ ನಡೆದಿದ್ದವು. ಆ ಪಂದ್ಯಗಳಲ್ಲಿ ‘ಬಾಲ್‌ ಬಾಯ್‌’ ಆಗಿ ಕೆಲಸ ಮಾಡುವ ಅದೃಷ್ಟ ನನಗೂ ಒಲಿದು ಬಂದಿತ್ತು. ಭಾರತದ ದಿಗ್ಗಜ ಕ್ರಿಕೆಟಿಗರ ಆಟವನ್ನು ಹತ್ತಿರದಿಂದ ನಿಂತು ನೋಡುವಾಗ ನನ್ನಲ್ಲಿ ಏನೋ ಪುಳಕ ಶುರುವಾಗಿತ್ತು. ಮುಂದೊಂದು ದಿನ ಇವರಂತೆ ದೇಶಕ್ಕಾಗಿ ಆಡಬೇಕೆಂಬ ಕನಸೂ ಕವಲೊಡೆದಿತ್ತು. ಕೊನೆಗದು ಸಾಕಾರವೂ ಆಯಿತು’......

ಕ್ರಿಕೆಟ್‌ ಲೋಕದ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಿಂದೊಮ್ಮೆ ಹೇಳಿದ್ದ ಮಾತುಗಳಿವು.

ಬ್ಯಾಟ್ಸ್‌ಮನ್‌ಗಳು ಬೌಂಡರಿ, ಸಿಕ್ಸರ್‌ಗೆ ಅಟ್ಟುವ ಚೆಂಡನ್ನು ಎತ್ತಿ ಕೊಡುವುದಷ್ಟೇ ‘ಬಾಲ್‌ ಬಾಯ್‌’ಗಳ ಕೆಲಸ ಅಲ್ಲ,  ಎಳೆಯ ಹುಡುಗರು ಹೊಸ ವಿಚಾರಗಳನ್ನು ಕಲಿಯಲು ಇದೊಂದು ಸುವರ್ಣ ಅವಕಾಶ ಎಂಬುದನ್ನು ಸಚಿನ್‌ ಮಾತುಗಳು ಸಾಕ್ಷೀಕರಿಸುವಂತಿವೆ. 

ADVERTISEMENT

ಶಿವಮೊಗ್ಗದ ವಿವಿಧ ಕ್ಲಬ್‌ಗಳಲ್ಲಿ ಕ್ರಿಕೆಟ್‌ ಪಾಠ ಕಲಿಯುತ್ತಿರುವ ಕನಸು ಕಂಗಳ ಹುಡುಗರಿಗೆ ಅಂತಹದೊಂದು ಸದವಕಾಶ ಈಗ ಸಿಕ್ಕಿದೆ. ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ 50ಕ್ಕೂ ಹೆಚ್ಚು ಬಾಲಕರು ‘ಬಾಲ್‌ ಬಾಯ್‌’ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ವೇತ ವರ್ಣದ ಪೋಷಾಕು ತೊಟ್ಟು ಬೆಳ್ಳಕ್ಕಿಗಳ ಹಾಗೆ ಮೈದಾನದ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ.

ಪಂದ್ಯಗಳ ವೇಳೆ ಬದ್ಧ ವೈರಿಗಳಂತೆ ಸೆಣಸುವ ಇವರು ಈಗ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಿದ್ದು, ಬಾಂಧವ್ಯದ ಬೆಸುಗೆಯಲ್ಲಿ ಬಂಧಿಯಾಗಿದ್ದಾರೆ. 

ಖ್ಯಾತನಾಮ ಕ್ರಿಕೆಟಿಗರನ್ನು ಹತ್ತಿರದಿಂದ ನೋಡಿ, ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡ ಖುಷಿ ಒಂದೆಡೆಯಾದರೆ, ಮುಂದೊಂದು ದಿನ ತಾವೂ ಅವರಂತೆ ಆಗಬೇಕೆಂಬ ಹಂಬಲ ಇವರಲ್ಲಿ ಮನೆ ಮಾಡಿದೆ.

‘ಕರ್ನಾಟಕ ತಂಡ ಶನಿವಾರ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡಿದ್ದರಿಂದ, ಬೇಗನೇ ಆಲೌಟ್‌ ಆಗಿಬಿಡಬಹುದೇನೊ ಎಂಬ ಆತಂಕ ನಮ್ಮನ್ನೂ ಕಾಡಿತ್ತು. ಆಟಗಾರರಿಗೆ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಕರುಣ್‌ ನಾಯರ್‌ ಅವರನ್ನು ನೋಡಿ ಕಲಿತಿದ್ದೇನೆ. ಮೊದಲ ದಿನ ಅವರು ತುಂಬಾ ‘ಡಾಟ್‌’ ಬಾಲ್‌ಗಳನ್ನು ಆಡಿದರು. ನಂತರ ಬೌಂಡರಿ, ಸಿಕ್ಸರ್‌ ಸಿಡಿಸಿ ಶತಕ ಬಾರಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಆಟಕ್ಕೆ ಕುದುರಿಕೊಂಡ ನಂತರ ಪಂದ್ಯದ ದಿಕ್ಕನ್ನೇ ಬದಲಿಸಬಹುದು ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಡೈಮಂಡ್‌ ಕ್ಲಬ್‌ನ ಎಸ್‌.ದಿಲೀಪ್‌ ಕುಮಾರ್‌ ಹೇಳಿದ. 

‘ಇದು ನನ್ನಂತಹ ಹುಡುಗರಿಗೆ ಜೀವನದಲ್ಲಿ ಸಿಕ್ಕ ದೊಡ್ಡ ಅವಕಾಶ. ಚೆಂಡನ್ನು ಹೇಗೆ ಡ್ರೈವ್‌ ಮಾಡಬೇಕು. ಚುರುಕಾಗಿ ಸಿಂಗಲ್ಸ್‌ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಕರ್ನಾಟಕದ ಆಟಗಾರರನ್ನು ನೋಡಿ ಕಲಿಯುತ್ತಿದ್ದೇನೆ. ಗೋವಾ ಆಟಗಾರರ ಫೀಲ್ಡಿಂಗ್‌ ಅದ್ಭುತವಾಗಿದೆ. ಅದು ಕೂಡ ನನಗೆ ಪ್ರೇರಣೆಯಾಗಿದೆ. ಅರ್ಜುನ್‌ ತೆಂಡೂಲ್ಕರ್‌ ಕೂಡ ಚೆನ್ನಾಗಿ ಬೌಲಿಂಗ್‌ ಮಾಡಿ ವಿಕೆಟ್‌ ಪಡೆದಿದ್ದಾರೆ. ಇದನ್ನೆಲ್ಲಾ ಹತ್ತಿರದಿಂದ ನೋಡಿದ್ದೇ ಆನಂದ’ ಎಂದು ಕರಣ್‌ ಜೈನ್‌ ಖುಷಿ ವ್ಯಕ್ತಪಡಿಸಿದ. 

‘ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌ ಮತ್ತು ಅಭಿನವ್‌ ಮನೋಹರ್‌ ಅವರನ್ನು ಟಿ.ವಿಯಲ್ಲಷ್ಟೇ ನೋಡಿದ್ದೆ. ಇಲ್ಲಿ ನೇರವಾಗಿ ಕಾಣುವ ಅವಕಾಶ ಸಿಕ್ಕಿದೆ. ಅವರ ಆಟ ಇಲ್ಲಿರುವ ನನ್ನಂತಹ ಎಳೆಯ ಹುಡುಗರ ಮೇಲೆ ಗಾಢ ಪ್ರಭಾವ ಬೀರಿದೆ’ ಎಂದು ಡಿಸಿಎ ಕ್ಲಬ್‌ನ ರವಿ ತೇಜಸ್ವಿ ಸಂತಸದಿಂದ ಹೇಳಿಕೊಂಡ. 

ಮಳೆ ಅಡ್ಡಿ: ನಡೆಯದ ಕೊನೆ ಅವಧಿಯ ಆಟ 

ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯಾಯಿತು. ಮಧ್ಯಾಹ್ನ 2.40ಕ್ಕೆ ಆರಂಭವಾದ ವರ್ಷಧಾರೆ ಕ್ರಮೇಣ ಬಿರುಸು ಪಡೆಯಿತು. ಹೀಗಾಗಿ ಅಂಪೈರ್‌ಗಳು ಆಟ ಸ್ಥಗಿತಗೊಳಿಸಿದರು. 3.40ರ ಸುಮಾರಿಗೆ ಮಳೆ ನಿಂತಿದ್ದರಿಂದ ಮೈದಾನದ ಸಿಬ್ಬಂದಿ ಪಿಚ್‌ ಹಾಗೂ ಅದರ ಸುತ್ತಲೂ ಹೊದಿಸಿದ್ದ ಟಾರ್ಪಾಲ್‌ಗಳನ್ನು ತೆರವುಗೊಳಿಸಿದರು. ಸೂಪರ್‌ ಸಾಪರ್‌ ಯಂತ್ರಗಳ ಮೂಲಕ ನೀರನ್ನು ಹೊರಹಾಕಿ ಮೈದಾನವನ್ನು ಆಟಕ್ಕೆ ಅಣಿಗೊಳಿಸುವ ಪ್ರಯತ್ನವೂ ನಡೆಯಿತು.  ಸಂಜೆ 3.50ರ ಸುಮಾರಿಗೆ ಪಿಚ್‌ ಪರಿಶೀಲಿಸಿದ ಅಂಪೈರ್‌ಗಳು ಉಭಯ ತಂಡಗಳ ನಾಯಕರೊಂದಿಗೂ ಸಮಾಲೋಚನೆ ನಡೆಸಿದರು. ಹೀಗಾಗಿ ಆಟ ಮತ್ತೆ ಆರಂಭವಾಗಬಹುದೆಂಬ ಆಶಾಭಾವ ಕ್ರಿಕೆಟ್‌ ಪ್ರಿಯರಲ್ಲಿ ಮನೆ ಮಾಡಿತ್ತು.  ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದತ್ತ ಬಂದಿದ್ದ ಪ್ರೇಕ್ಷಕರು ಸಂಜೆಯವರೆಗೂ ಆಟ ನೋಡಲು ಕಾದು ನಿಂತಿದ್ದರು. ಆಗಸದಲ್ಲಿ ಮತ್ತೆ ಮೋಡ ಕವಿದಿದ್ದರಿಂದ ಹಾಗೂ ಮೈದಾನದ ‘ಔಟ್‌ ಫೀಲ್ಡ್‌’ ತುಂಬಾ ಒದ್ದೆಯಾಗಿದ್ದರಿಂದ ಕೊನೆಯ ಅವಧಿಯ ಆಟ ನಡೆಯಲಿಲ್ಲ. ಹೀಗಾಗಿ ಕ್ರಿಕೆಟ್‌ ಪ್ರಿಯರು ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದರು. 

ಮಳೆಯಲ್ಲಿ ನೆನೆಯುತ್ತಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ ಕರ್ನಾಟಕದ ಶ್ರೇಯಸ್‌ ಗೋಪಾಲ್‌ ‌ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.