ADVERTISEMENT

ಕಾಲ್ತುಳಿತ | ದುರ್ಘಟನೆ ಸುತ್ತ ಪಿಸುಮಾತು: ಸಹಜ ಸ್ಥಿತಿಯತ್ತ ಚಿನ್ನಸ್ವಾಮಿ ಅಂಗಳ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 23:35 IST
Last Updated 7 ಜೂನ್ 2025, 23:35 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ನಡೆದ ನಂತರ ಕ್ರೀಡಾಂಗಣದ ಒಳಗೆ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಕುತೂಹಲ ಜಾಸ್ತಿಯಾಗಿದೆ </p></div>

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ನಡೆದ ನಂತರ ಕ್ರೀಡಾಂಗಣದ ಒಳಗೆ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಕುತೂಹಲ ಜಾಸ್ತಿಯಾಗಿದೆ

   

-ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದ ದುರ್ಘಟನೆಗೆ ಈಗ ನಾಲ್ಕು ದಿನಗಳಾಗಿವೆ. ಆ ಕರಾಳ ನೆನಪಿನಿಂದ ಹೊರಬರುವ ಪ್ರಯತ್ನದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಇದೆ. 

ADVERTISEMENT

ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ದುರ್ಘಟನೆ ನಡೆದಿತ್ತು. ನಂತರ ಎರಡು ದಿನ ಕೆಎಸ್‌ಸಿಎಗೆ ರಜೆ ನೀಡಲಾಗಿತ್ತು. ಶನಿವಾರ ಕ್ರೀಡಾಂಗಣದಲ್ಲಿ ಮತ್ತೆ ಚಟುವಟಿಕೆಗಳನ್ನು ಆರಂಭಿಸಲಾಯಿತು. ಆದರೆ, ಇಲ್ಲಿಯ ವಾತಾವರಣ ಎಂದಿನಂತಿರಲಿಲ್ಲ. ಕ್ರಿಕೆಟ್‌ ಚಟುವಟಿಕೆ ಅಥವಾ ಕ್ರಿಕೆಟಿಗರ ಓಡಾಟ ಹೆಚ್ಚಿರಲಿಲ್ಲ. ಆದರೆ, ಪೊಲೀಸ್ ಜೀಪ್‌ಗಳ ಓಡಾಟ, ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಭೇಟಿ ದಿನವಿಡೀ ಇದ್ದವು. ಈ ನಡುವೆ ಕ್ಲಬ್‌ ಹೌಸ್‌ ಮತ್ತು ಕೆಎಸ್‌ಸಿಎಗೆ ಕಚೇರಿಗೆ ಕೆಲವು ಸದಸ್ಯರು ಬಂದು ಹೋಗುತ್ತಿದ್ದರು. ಪರಸ್ಪರ ಭೇಟಿಯಾದವರೆಲ್ಲರೂ ಕಾಲ್ತುಳಿತ ಘಟನೆಯ ಕುರಿತು ಚರ್ಚೆ ನಡೆಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ವಾದ ಮತ್ತು ಪ್ರತಿವಾದಗಳು ಗಮನ ಸೆಳೆಯುತ್ತಿದ್ದವು. 

‘ಒಂದು ಉದಾಹರಣೆಗಾಗಿ ಹೇಳುತ್ತಿರುವೆ ಕೇಳಿ; ನಮ್ಮ ಮನೆಯಲ್ಲಿ ಯಾವುದೋ ಒಂದು ಕಾರ್ಯಕ್ರಮದ ದಿನ ನಿಗದಿಯಾಗಿರುತ್ತದೆ. ಅದೇ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ಯಾರದ್ದೋ ಸಾವು ಸಂಭವಿಸುತ್ತದೆ. ಆಗ ನಾವು ನಮ್ಮ ಮನೆಯ ಪೂರ್ವನಿಗದಿಯ ಕಾರ್ಯಕ್ರಮವನ್ನು ರದ್ದು ಮಾಡಿಬಿಡುತ್ತೇವೆ. ಅದು ಮಾನವೀಯತೆ ಮತ್ತು ಸಾಮಾಜಿಕ ಸಹಜೀವನದ ಸಂಕೇತ. ಆದರೆ, ಕ್ರೀಡಾಂಗಣದ ಮುಂದೆ ದುರ್ಘಟನೆ ನಡೆಯುತ್ತದೆ. ಅದಾಗಿ ಕೆಲಹೊತ್ತಿನ ನಂತರ ಮೈದಾನದೊಳಗೆ ಕಾರ್ಯಕ್ರಮ ನಡೆಯುತ್ತದೆ. ಇದು ನ್ಯಾಯವೇ‘  ಎಂದು ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ನಿಂತಿದ್ದ ಹಿರಿಯ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. 

‘ಚಿನ್ನಸ್ವಾಮಿ ಕ್ರೀಡಾಂಗಣವು ಅದೇಷ್ಟೋ  ಅದ್ಭುತ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆಯಾಗಿತ್ತು. ಭಾರತದ ಕ್ರಿಕೆಟ್ ಪರಂಪರೆಯ ಬಹುಮುಖ್ಯ ಕೊಂಡಿಯೂ ಇದಾಗಿದೆ. ಆದರೆ, ಈಗ ಆಗಿದ್ದು ಬಹುದೊಡ್ಡ ದುರಂತ. ಇದರಿಂದ ನಮಗಂತೂ ಬಹಳ ದುಃಖವಾಗಿದೆ’ ಎಂದು ಇನ್ನೊಬ್ಬ ಸದಸ್ಯರು ಬೇಸರ ವ್ಯಕ್ತಪಡಿಸಿದರು. 

ಆದರೆ ಇನ್ನೂ ಕೆಲವು ಸದಸ್ಯರು ಘಟನೆಯ ಕುರಿತು ಮಾತನಾಡಲು ಹಿಂಜರಿದರು. ಕುಶಲೋಪರಿಯಲ್ಲಿಯೇ ಮಾತು ಮುಗಿಸಿ ನಿರ್ಗಮಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.