ADVERTISEMENT

ಆರ್‌ಸಿಬಿಗೆ ಪ್ರಶಸ್ತಿ ಜಯಿಸುವ ಒತ್ತಡ ಹೆಚ್ಚಿದೆ: ಕೊಹ್ಲಿ

ರಾಯಿಟರ್ಸ್
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ನಾವು ಯಾವುದಾದರೂ ಒಂದು ವಸ್ತುವನ್ನು ಪಡೆಯುವ ಉತ್ಕಟತೆಯೊಂದಿಗೆ ನಿರಂತರವಾಗಿ ಬೆನ್ನುಹತ್ತಿದಾಗ ಅದು ನಮ್ಮಿಂದ ದೂರ ದೂರ ಸಾಗುತ್ತಿರುತ್ತದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

2008ರಿಂದ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿಯು ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ. ಈ ಕುರಿತು ಸುದ್ದಿಗಾರರೊಂದಿಗೆ ವಿರಾಟ್ ಮಾತನಾಡಿದ್ದಾರೆ.

‘ಪ್ರತಿಯೊಂದು ಋತುವಿನಲ್ಲಿಯೂ ಈ ಬಾರಿ ನಮ್ಮ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಕಣಕ್ಕಿಳಿಯುತ್ತೇವೆ. ಅದಕ್ಕೆ ತಕ್ಕಂತೆ ಶ್ರೇಷ್ಠ ಆಟಗಾರರು ನಮ್ಮ ತಂಡದಲ್ಲಿ ಆಡಿದ್ದಾರೆ. ಎಬಿ ಡಿವಿಲಿಯರ್ಸ್, ಕ್ರಿಸ್‌ ಗೇಲ್ ಅವರಂತಹ ಅಪ್ರತಿಮರು ತಂಡದಲ್ಲಿ ಆಡಿದ್ದಾರೆ.ಆದರೂ ಪ್ರತಿ ವರ್ಷ ಜಯದ ಹಾದಿಯಲ್ಲಿ ಎಡವಿದ್ದೇವೆ. ಅದರಿಂದ ಪ್ರಶಸ್ತಿ ಜಯದ ಒತ್ತಡ ಹೆಚ್ಚುತ್ತಲೇ ಹೋಗಿದೆ’ ಎಂದು ಕೊಹ್ಲಿ ಒಪ್ಪಿಕೊಂಡರು.

ADVERTISEMENT

‘ಆಟವನ್ನು ಆಸ್ವಾದಿಸುವ ಮತ್ತು ಆನಂದಿಸುವ ರೀತಿಯನ್ನು ಕಲಿಯಬೇಕಿದೆ. ದೊಡ್ಡ ದೊಡ್ಡ ಆಟಗಾರರು ತಂಡದಲ್ಲಿ ಇದ್ದಾಗ ಅಭಿಮಾನಿಗಳ ನೋಟ ತಂಡದ ಮೇಲೆ ಕೇಂದ್ರಿಕೃತವಾಗಿರುತ್ತದೆ’ ಎಂದರು.

‘ತಂಡದ ಪ್ರದರ್ಶನ ತೀರಾ ಕಳಪೆಯೇನಲ್ಲ. ಇಷ್ಟು ವರ್ಷಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇವೆ. ಆದರೆ ಅದೆಲ್ಲವೂ ಈಗ ಅಪ್ರಸ್ತುತ. ಏಕೆಂದರೆ, ಪ್ರಶಸ್ತಿ ಗೆಲುವಿನ ಮಹತ್ವವೇ ಬೇರೆ. ಅದನ್ನು ಜಯಿಸುವ ಅರ್ಹತೆ ನಮಗೆ ಇದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

ಈ ಬಾರಿಯ ಆವೃತ್ತಿಗಾಗಿ ನಡೆದಿದ್ದ ಹರಾಜು ಪ್ರಕ್ರಿಯೆಯೆಲ್ಲಿ ಆರ್‌ಸಿಬಿಯು ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅದರಿಂದಾಗಿ ಈ ಸಲ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಆದರೆ, ಕೊರೊನಾ ವೈರಸ್ ಹಾವಳಿಯಿಂದಾಗಿ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚುತ್ತಿದ್ದ ಐಪಿಎಲ್‌ ನಡೆಯುವುದು ಅನಿಶ್ಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.