ADVERTISEMENT

ಕೋವಿಡ್‌ ವೀರರಿಗೆ ಆರ್‌ಸಿಬಿ ಗೌರವ

ಪಿಟಿಐ
Published 17 ಸೆಪ್ಟೆಂಬರ್ 2020, 16:44 IST
Last Updated 17 ಸೆಪ್ಟೆಂಬರ್ 2020, 16:44 IST
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ– ಪಿಟಿಐ ಸಂಗ್ರಹ ಚಿತ್ರ
ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ– ಪಿಟಿಐ ಸಂಗ್ರಹ ಚಿತ್ರ   

ದುಬೈ: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಗೌರವ ಸಲ್ಲಿಸಲು ಐಪಿಎಲ್ ಫ್ರಾಂಚೈಸ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಿರ್ಧರಿಸಿದೆ. ಈ ಬಾರಿ ನಡೆಯುವ ಐಪಿಎಲ್‌ ಟೂರ್ನಿಯಲ್ಲಿ ‘ಮೈ ಕೋವಿಡ್‌ ಹೀರೋಸ್‌‘ ಎಂಬ ಒಕ್ಕಣೆ ಇರುವ ಜೆರ್ಸಿ ಧರಿಸಿ ತಂಡದ ಆಟಗಾರರು ಕಣಕ್ಕಿಳಿಯಲಿದ್ದಾರೆ.

ಆಟಗಾರರು ಅಭ್ಯಾಸ ನಡೆಸುವ ಹಾಗೂ ಪಂದ್ಯದಲ್ಲಿ ಆಡುವ ವೇಳೆ ‘ಕೋವಿಡ್‌ ಹೀರೋಸ್‌‘ ಎಂಬ ಹಿಂಬರಹ ಇರುವ ಜೆರ್ಸಿಯನ್ನು ಧರಿಸಲಿದ್ದಾರೆ ಎಂದು ಫ್ರಾಂಚೈಸ್‌ಗುರುವಾರ ತಿಳಿಸಿದೆ.

‘ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಆಟಗಾರರು ತಾವು ಆಡುವ ಮೊದಲ ಪಂದ್ಯದಲ್ಲಿ ಧರಿಸುವ ಜೆರ್ಸಿಯನ್ನು ಹರಾಜಿಗೆ ಇಡಲಿದ್ದು, ಇದರಿಂದ ಬಂದ ಮೊತ್ತವನ್ನು ಗಿವ್‌ಇಂಡಿಯಾ ಫೌಂಡೇಶನ್‌ಗೆ ದೇಣಿಗೆಯಾಗಿ ನೀಡಲಿದ್ದಾರೆ‘ ಎಂದು ಫ್ರ್ಯಾಂಚೈಸ್‌ ಹೇಳಿದೆ.

ADVERTISEMENT

ಜೆರ್ಸಿಗಳ ಅನಾವರಣ ಕಾರ್ಯಕ್ರಮಗುರುವಾರ ಆನ್‌ಲೈನ್‌ ಮೂಲಕ ನಡೆಯಿತು. ಆರ್‌ಸಿಬಿ ಫ್ರ್ಯಾಂಚೈಸ್‌ ಮುಖ್ಯಸ್ಥ ಸಂಜೀವ್‌ ಚೂರಿವಾಲಾ, ನಾಯಕ ವಿರಾಟ್‌ ಕೊಹ್ಲಿ, ಪಾರ್ಥಿವ್‌ ಪಟೇಲ್‌ ಹಾಗೂ ಕನ್ನಡಿಗ ಆಟಗಾರ ದೇವದತ್ತ ಪಡಿಕ್ಕಲ್‌ ಈ ವೇಳೆ ಇದ್ದರು.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವಾಗಲೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜನರ ಬೆನ್ನಿಗೆ ನಿಂತಿದೆ. ಇದೀಗ ಈ ಕೋವಿಡ್ ವೀರರು ಮಹತ್ವದ ಉದ್ದೇಶಕ್ಕಾಗಿ ನಿರಂತರ ಹೋರಾಡುವ ಮೂಲಕ ನಮ್ಮ ಉದ್ದೇಶವನ್ನು ಸಾಕಾರಗೊಳಿಸುತ್ತಿದ್ದಾರೆ‘ ಎಂದು ಸಂಜೀವ್‌ ಚೂರಿವಾಲಾ ಹೇಳಿದ್ದಾರೆ.

ಸ್ಥಳೀಯ ಆಟಗಾರರ ನೆರವು ಪಡೆದ ಆರ್‌ಸಿಬಿ

ದುಬೈ: ಐಪಿಎಲ್‌ಗೆ ಸಜ್ಜಾಗುತ್ತಿರುವ ಆರ್‌ಸಿಬಿ ತಂಡ ಅಭ್ಯಾಸದ ವೇಳೆ ಸ್ಥಳೀಯ ಆಟಗಾರರ ನೆರವು ಪಡೆಯುತ್ತಿದೆ. ಯುಎಇ ತಂಡದ ನಾಯಕ ಅಹಮ್ಮದ್ ರಜಾ ಮತ್ತು ಯುವ ಆಟಗಾರ ಕಾರ್ತಿಕ್ ಮೇಯಪ್ಪನ್ ಇವರ ಪೈಕಿ ಪ್ರಮುಖರು.

ರಜಾ ಅವರು ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲೇ ಇದ್ದು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಹೀಗಾಗಿ ಗುರುವಾರದಿಂದ ತಂಡದೊಂದಿಗೆ ಅಭ್ಯಾಸ ಮಾಡಲು ಆರಂಭಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಎಡಗೈ ಸ್ಪಿನ್ನರ್ ರಜಾ ಅವರನ್ನು ಆರ್‌ಸಿಬಿ ಬೌಲಿಂಗ್ ಕೋಚ್‌ ಶ್ರೀಧರನ್ ಶ್ರೀರಾಮ್ ಅವರ ಶಿಫಾರಸಿನ ಮೇರೆಗೆ ತಂಡದೊಂದಿಗೆ ಸೇರಿಸಿಕೊಳ್ಳಲಾಗಿತ್ತು. ಸ್ಪಿನ್‌ ಬೌಲಿಂಗ್‌ಗೆ ಸಂಬಂಧಿಸಿ ರಜಾ ಅವರ ಸಹಾಯವನ್ನೂ ಶ್ರೀಧರನ್‌ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.