ADVERTISEMENT

ಆರ್‌ಸಿಬಿ ಟ್ವೀಟ್‌: ಸೋಂಕು ಭೀತಿ, ಐಪಿಎಲ್‌ ತಂಡಗಳ ಸಿದ್ಧತಾ ಶಿಬಿರ ಮುಂದಕ್ಕೆ

ಪಿಟಿಐ
Published 16 ಮಾರ್ಚ್ 2020, 20:15 IST
Last Updated 16 ಮಾರ್ಚ್ 2020, 20:15 IST
   

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಭೀತಿ ಹೆಚ್ಚುತ್ತಿರುವ ಕಾರಣ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡುವ ಎಂಟೂ ಫ್ರಾಂಚೈಸ್‌ಗಳು ತಮ್ಮ ಅಭ್ಯಾಸ ಶಿಬಿರಗಳನ್ನು ಮುಂದೂಡಿವೆ. ಹಣದ ಹೊಳೆ ಹರಿಸುವ ಈ ಟೂರ್ನಿಯನ್ನು ಮೂರು ದಿನಗಳ ಹಿಂದೆಯಷ್ಟೇ, ಮಾರ್ಚ್‌ 29 ರಿಂದ ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕ್ಯಾಂಪ್‌ ಮಾರ್ಚ್‌ 21ರಂದು ಆರಂಭವಾಗಬೇಕಿತ್ತು. ಮೂರು ಬಾರಿಯ ಚಾಂಪಿಯನ್ನರಾದ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಜೊತೆ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳು ಈ ಮೊದಲೇ ಶಿಬಿರಗಳನ್ನು ಮುಂದೂಡಿದ್ದವು.

‘ಐಪಿಎಲ್‌ನಲ್ಲಿ ಒಳಗೊಳ್ಳುವ ಎಲ್ಲರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್‌ 21ರಂದು ಆರಂಭವಾಗಬೇಕಾಗಿದ್ದ ಆರ್‌ಸಿಬಿ ತಂಡದ ಸಿದ್ಧತಾ ಶಿಬಿರವನ್ನು ಮುಂದಿನ ಸೂಚನೆ ನೀಡುವವರೆಗೆಮುಂದಕ್ಕೆ ಹಾಕಲಾಗಿದೆ’ ಎಂದು ಆರ್‌ಸಿಬಿಯ ಟ್ವೀಟ್‌ನಲ್ಲಿ ತಿಳಿಸಿದೆ. ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸೋಮವಾರ ಟ್ವೀಟ್‌ನಲ್ಲಿ ಕೋರಲಾಗಿದೆ.‌ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ.‌

ADVERTISEMENT

ಕೇಂದ್ರ ಸರ್ಕಾರ, ಕಳೆದ ಶುಕ್ರವಾರ ಪ್ರಯಾಣ ನಿರ್ಬಂಧ ಹೇರಿತ್ತು. ಜೊತೆಗೆ ಸೋಂಕು ಭೀತಿಯಿಂದ ಮೂರು ರಾಜ್ಯಗಳು ಕ್ರೀಡಾಕೂಟಗಳನ್ನು ನಡೆಸದಂತೆ ಸೂಚಿಸಿದ್ದವು. ಹೀಗಾಗಿ ಬಿಸಿಸಿಐ ವಿಧಿಯಿಲ್ಲದೇ ಐಪಿಎಲ್‌ ಟೂರ್ನಿಯನ್ನು ಮುಂದಕ್ಕೆ ಹಾಕಿತ್ತು.

ಸಿಎಸ್‌ಕೆ ತಂಡ ಶನಿವಾರ ಕ್ಯಾಂಪ್‌ ರದ್ದುಗೊಳಿಸಿದ್ದು, ನಾಯಕ ಮಹೇಂದ್ರ ಸಿಂಗ್‌ ಧೋನಿ ರಾಂಚಿಗೆ ಮರಳಿದ್ದರು. ಬೇರೆ ಫ್ರಾಂಚೈಸ್‌ಗಳ ಆಟಗಾರರೂ ತವರಿಗೆ ಮರಳುತ್ತಿದ್ದಾರೆ.

ಪರಿಸ್ಥಿತಿ ಸುಧಾರಿಸಿ, ನಿರ್ಬಂಧ ವಿಧಿಸಿರುವ ಮೂರು ರಾಜ್ಯಗಳು ಆಡಲು ಅನುಮತಿ ನೀಡಬಹುದೆಂಬ ವಿಶ್ವಾಸದಲ್ಲಿ ಫ್ರಾಂಚೈಸ್‌ ಮಾಲೀಕರು ಇದ್ದಾರೆ.

ಭಾರತದಲ್ಲಿ 114 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಕೋವಿಡ್‌–19 ಜ್ವರದಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.