ADVERTISEMENT

ಕೊಹ್ಲಿ ಅನುಪಸ್ಥಿತಿಯು ಭಾರತ ತಂಡದ ಮೇಲೆ ಪರಿಣಾಮ ಬೀರಲಿದೆ: ಜಸ್ಟಿನ್‌ ಲ್ಯಾಂಗರ್‌

ಪಿಟಿಐ
Published 13 ನವೆಂಬರ್ 2020, 15:37 IST
Last Updated 13 ನವೆಂಬರ್ 2020, 15:37 IST
ಜಸ್ಟಿನ್‌ ಲ್ಯಾಂಗರ್‌–ರಾಯಿಟರ್ಸ್ ಚಿತ್ರ
ಜಸ್ಟಿನ್‌ ಲ್ಯಾಂಗರ್‌–ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ‘ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿನಾಯಕ ವಿರಾಟ್‌ ಕೊಹ್ಲಿ ಅವರ ಅನುಪಸ್ಥಿತಿಯು ಭಾರತ ತಂಡದ ಮೇಲೆ ಖಂಡಿತ ಪರಿಣಾಮ ಬೀರಲಿದೆ‘ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್ ಹೇಳಿದ್ದಾರೆ. ರಜೆ ತೆಗೆದುಕೊಳ್ಳುತ್ತಿರುವ ಕೊಹ್ಲಿ ಅವರ ನಿರ್ಧಾರವನ್ನು ಗೌರವಿಸುವುದಾಗಿಯೂ ಅವರು ನುಡಿದಿದ್ದಾರೆ.

ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ರಜೆ ಅವಕಾಶ ನೀಡಿದೆ. ಬಾರ್ಡರ್‌–ಗಾವಸ್ಕರ್ ಸರಣಿಯ ಮೊದಲ ಟೆಸ್ಟ್‌ (ಡಿಸೆಂಬರ್‌ 17ರಿಂದ 21) ಆಡಿದ ಬಳಿಕ ಅವರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಲು ಲಭ್ಯ ಇರುವುದಿಲ್ಲ.

‘ವಿರಾಟ್‌ ಕೊಹ್ಲಿ, ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಆಟಗಾರ. ಇದಕ್ಕೆ ಬ್ಯಾಟಿಂಗ್‌ ಅಷ್ಟೇ ಅಲ್ಲ; ಆಟದ ಬಗೆಗಿನ ಅವರ ಶ್ರದ್ಧೆ, ಸಾಮರ್ಥ್ಯ ಹಾಗೂ ಫಿಲ್ಡಿಂಗ್‌ ವಿಧಾನ ಎಲ್ಲವೂ ಕಾರಣ‘ ಎಂದು ಶುಕ್ರವಾರ ವಿಡಿಯೊ ಕಾನ್ಫ್‌ರೆನ್ಸ್ ಒಂದರಲ್ಲಿ ಲ್ಯಾಂಗರ್‌ ಹೇಳಿದ್ದಾರೆ.

ADVERTISEMENT

ಕೊಹ್ಲಿ ಅವರು ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ (ಡಿಸೆಂಬರ್‌ 26ರಿಂದ 30), ಸಿಡ್ನಿ (ಜನವರಿ 7–11) ಹಾಗೂ ಗಾಬಾದಲ್ಲಿ (ಜನವರಿ 15–19)ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ.

‘ಕೊಹ್ಲಿ ಅವರ ಅನುಪಸ್ಥಿತಿ ತಂಡದ ಮೇಲೆ ಖಂಡಿತ ಪರಿಣಾಮ ಬೀರಲಿದೆ. ಆದರೆ ಕಳೆದ ಬಾರಿ (2018–19) ಭಾರತ ತಂಡ ನಮ್ಮನ್ನು ಸೋಲಿಸಿತ್ತು. ಅದು ಅತ್ಯುತ್ತಮ ತಂಡ. ವಿರಾಟ್‌ ಇರಲಿ, ಬಿಡಲಿ, ನಮ್ಮ ಆಟಗಾರರು ಮೈಮರೆಯುವ ಹಾಗಿಲ್ಲ‘ ಎಂದು ಲ್ಯಾಂಗರ್‌ ಹೇಳಿದ್ದಾರೆ.

ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ, ಮೂರು ಟ್ವೆಂಟಿ–20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.