ADVERTISEMENT

ಆಗಸ್ಟ್ ತಿಂಗಳಲ್ಲಿ ವಿಂಡೀಸ್‌ ಸರಣಿ: ಕೊಹ್ಲಿ, ಬೂಮ್ರಾಗೆ ವಿಶ್ರಾಂತಿ ಸಂಭವ

ಆಗಸ್ಟ್ ತಿಂಗಳಲ್ಲಿ ವಿಂಡೀಸ್‌ ವಿರುದ್ಧ ಟಿ20, ಏಕದಿನ ಸರಣಿ

ಪಿಟಿಐ
Published 25 ಜೂನ್ 2019, 2:37 IST
Last Updated 25 ಜೂನ್ 2019, 2:37 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಸೌತಾಂಪ್ಟನ್‌, ಇಂಗ್ಲೆಂಡ್‌: ವಿಶ್ವಕಪ್‌ ಮುಗಿದ ಬೆನ್ನಿಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಅಮೆರಿಕ ಮತ್ತು ಕೆರಿಬಿಯನ್‌ ದ್ವೀಪಗಳಲ್ಲಿ ನಡೆಯಲಿರುವ ನಿಗದಿತ ಓವರುಗಳ ಸರಣಿಗೆ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಆಗಸ್ಟ್ 3 ರಿಂದ ಈ ಸರಣಿ ನಡೆಯಲಿದೆ. ಆದರೆ ಕೊಹ್ಲಿ ಮತ್ತು ಬೂಮ್ರಾ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಎರಡು ಟೆಸ್ಟ್‌ಗಳ ಸರಣಿ ವೇಳೆ ತಂಡಕ್ಕೆ ವಾಪಸಾಗಲಿದ್ದಾರೆ.

‘ವಿರಾಟ್‌ ಮತ್ತು ಜಸ್‌ಪ್ರೀತ್‌ ಅವರಿಗೆ ಮೂರು ಪಂಧ್ಯಗಳ ಟಿ–20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ವಿಶ್ರಾಂತಿ ನೀಡಲಾಗುವುದು. ಆಸ್ಟ್ರೇಲಿಯಾ ವಿರುದ್ಧ ಸರಣಿಯಿಂದ ಆರಂಭಿಸಿ ಕೊಹ್ಲಿ ನಿರಂತರವಾಗಿ ಆಡಿದ್ದಾರೆ. ಬೂಮ್ರಾ ಅವರಿಗೂ ಒತ್ತಡ ಅಧಿಕವಾಗಿತ್ತು. ಅವರು ಟೆಸ್ಟ್‌ ಸರಣಿಗೆ ಹಿಂತಿರುಗುತ್ತಾರೆ’ ಎಂದು ಹೆಸರು ಹೇಳಬಯಸದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ.

ADVERTISEMENT

ಸುಮಾರು ಒಂದೂವರೆ ತಿಂಗಳ ದೀರ್ಘ ವಿಶ್ವಕಪ್‌ ಟೂರ್ನಿಯ ನಂತರ ಇನ್ನೂ ಕೆಲವು ಪ್ರಮುಖ ಆಟಗಾರರಿಗೂ ವಿರಾಮ ನೀಡುವ ಸಾಧ್ಯತೆಯಿದೆ. ವಿಶ್ವಕಪ್‌ನಲ್ಲಿ ನಾಲ್ಕು ಜಯಗಳೊಂದಿಗೆ ಭಾರತ ಈಗಾಗಲೇ ಸೆಮಿಫೈನಲ್‌ನತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಫೈನಲ್‌ ತಲುಪಿದರೆ ಜುಲೈ 14ರವರೆಗೆ ಪ್ರಮುಖ ಆಟಗಾರರು ಆಡಬೇಕಾಗುತ್ತದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು, ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಜೊತೆ ಸಮಾಲೋಚನೆ ನಡೆಸಿದ ನಂತರ ಟೆಸ್ಟ್ ಸರಣಿಯನ್ನು, ಟಿ–20 ಮತ್ತು ಏಕದಿನ ಸರಣಿಯ ನಂತರ ನಿಗದಿಗೊಳಿಸಲಾಗಿದೆ. ಮೂಲ ಕಾರ್ಯಕ್ರಮ ಪಟ್ಟಿಯ ಪ್ರಕಾರ ಮೊದಲು ಟೆಸ್ಟ್‌ ಸರಣಿ ನಡೆಯಬೇಕಿತ್ತು.

ಮೊದಲ ಟೆಸ್ಟ್‌ ಪಂದ್ಯ ಆಗಸ್ಟ್‌ 22ರಂದು ಆ್ಯಂಟಿಗಾದಲ್ಲಿ ಆರಂಭವಾಗಲಿದೆ. ಅದಕ್ಕೆ ಮುನ್ನ ಆ್ಯಂಟಿಗಾ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ವೇಳೆ ಇವರಿಬ್ಬರು ತಂಡ ಸೇರಿಕೊಳ್ಳುವ ನಿರೀಕ್ಷೆಯಿದೆ.

ಮಯಾಂಕ್‌ ಅಗರವಾಲ್‌, ಪ್ರಥ್ವಿ ಶಾ ಮತ್ತು ಹನುಮ ವಿಹಾರಿ ವೆಸ್ಟ್‌ ಇಂಡೀಸ್‌ನಲ್ಲಿ ಭಾರತ ‘ಎ’ ತಂಡದ ಪರ ಆಡಲಿದ್ದಾರೆ.

ಕೃಣಾಲ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್‌, ರಾಹುಲ್‌ ಚಾಹರ್‌, ಸಂಜು ಸಾಮ್ಯನ್‌ ಅವರನ್ನೂ ಟಿ–20 ಸರಣಿಗೆ ಪರಿಗಣಿಸುವ ಸಾಧ್ಯತೆಯಿದೆ. ಮೂರು ಪಂದ್ಯಗಳ ಟಿ–20 ಸರಣಿಯ ಮೊದಲ ಎರಡು ಪಂದ್ಯಗಳು ಫ್ಲಾರಿಡಾದ ಲಾಡೆರ್‌ಹಿಲ್‌ನಲ್ಲಿ ಆಗಸ್ಟ್‌ 3 ಮತ್ತು 4ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.