ಲಖನೌ(ಉತ್ತರ ಪ್ರದೇಶ): ಭಾರತ ಕ್ರಿಕೆಟ್ ತಂಡದ ಆಟಗಾರ ಮತ್ತು ಐಪಿಎಲ್‌ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸದಸ್ಯ ರಿಂಕು ಸಿಂಗ್, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಲಖನೌದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿದೆ. ರಿಂಕು ಸಿಂಗ್ ಮತ್ತು ಪ್ರಿಯಾ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಇದೇ ವರ್ಷ ನವೆಂಬರ್ 18ರಂದು ವಿವಾಹ ನೆರವೇರಲಿದೆ.
26 ವರ್ಷದ ಪ್ರಿಯಾ ಸರೋಜ್ ಮಚಲೀಶಹರ್‌ನಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್, ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಅಖಿಲೇಶ್ ಪತ್ನಿ, ಸಂಸದೆ ಡಿಂಪಲ್ ಯಾದವ್, ರಾಜ್ಯಸಭಾ ಸದಸ್ಯೆ, ಹಿರಿಯ ನಟಿ ಜಯಾ ಬಚ್ಚನ್, ಎಸ್‌ಪಿ ಹರಿಯ ನಾಯಕ ಶಿವಪಾಲ್ ಯಾದವ್ ಸೇರಿದಂತೆ ಬಾಲಿವುಡ್ ತಾರೆಯರು, ಕ್ರಿಕೆಟಿಗರು, ರಾಜಕೀಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನಿಶ್ಚತಾರ್ಥದ ವಿಡಿಯೊ, ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಖಿಲೇಶ್ ಯಾದವ್, ‘ರಾಜಕೀಯ ಮತ್ತು ಕ್ರಿಕೆಟ್ ಎರಡು ವಿಭಿನ್ನ ಕ್ಷೇತ್ರಗಳು. ಆದರೆ, ಇಬ್ಬರು ವ್ಯಕ್ತಿಗಳು ಒಂದೇ ರೀತಿಯ ಆಲೋಚನೆಗಳು ಮತ್ತು ನಡವಳಿಕೆಗಳನ್ನು ಹೊಂದಿರುವಾಗ ಇದು ಸಾಧ್ಯ. ಎರಡೂ ಕುಟುಂಬಗಳು ತುಂಬಾ ಸಂತೋಷವಾಗಿರುತ್ತವೆ. ಈ ಎರಡೂ ಕುಟುಂಬಗಳನ್ನು ಅಭಿನಂದಿಸುತ್ತೇನೆ’ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.