ADVERTISEMENT

ಭೀಕರ ಕಾರು ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ ಮೊದಲ ಪ್ರಶ್ನೆ ಏನಾಗಿತ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2025, 11:18 IST
Last Updated 29 ಜೂನ್ 2025, 11:18 IST
<div class="paragraphs"><p>2022ರ ಭೀಕರ ಕಾರು ಅಪಘಾತದಿಂದ ರಿಷಭ್ ಪಂತ್ ಪಾರು</p></div>

2022ರ ಭೀಕರ ಕಾರು ಅಪಘಾತದಿಂದ ರಿಷಭ್ ಪಂತ್ ಪಾರು

   

ಲಂಡನ್: 2022ರ ಡಿಸೆಂಬರ್ 30ರಂದು ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ ಮೊದಲ ಪ್ರಶ್ನೆ 'ಇನ್ನು ಎಂದಾದರೂ ನನ್ನಿಂದ ಮತ್ತೆ ಆಡಲು ಸಾಧ್ಯವೇ?' ಎಂದಾಗಿತ್ತು.

ADVERTISEMENT

ದೆಹಲಿ-ಡೆಹರಾಡೂನ್ ಹೆದ್ದಾರಿಯಲ್ಲಿ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಹೊಸ ವರ್ಷಾಚರಣೆಗಾಗಿ ಪಂತ್ ರೂರ್ಕಿಯಲ್ಲಿರುವ ಮನೆಗೆ ಸಂಚರಿಸುತ್ತಿದ್ದಾಗ ಭೀಕರ ಕಾರು ಅಪಘಾತ ಸಂಭವಿಸಿತ್ತು.

ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪಂತ್ ಅವರ ತಲೆ, ಬೆನ್ನು, ಕಾಲಿಗೆ ಗಾಯಗಳಾಗಿದ್ದವು. ಬಲಿಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಗಾಯಕ್ಕೆ ತುತ್ತಾಗಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಪಂತ್ ಅವರಿಗೆ ಚಿಕಿತ್ಸೆ ನೀಡಿರುವ ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಈ ಘಟನೆಗಳ ಕುರಿತು ಮೆಲುಕು ಹಾಕಿದ್ದಾರೆ. ಪಂತ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರಲ್ಲಿ ಕೇಳಿದ ಮೊದಲ ಪ್ರಶ್ನೆ 'ಮತ್ತೆ ಆಡಲು ಸಾಧ್ಯವೇ' ಎಂದಾಗಿತ್ತು ಎಂದಿದ್ದಾರೆ.

'ದಿ ಟೆಲಿಗ್ರಾಫ್‌'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪರ್ದಿವಾಲಾ, ಪಂತ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ದೇಹದೆಲ್ಲೆಡೆ ಗಾಯಗಳಾಗಿತ್ತು. ಚರ್ಮ ಹಾಗೂ ಮಾಂಸ ಕಿತ್ತು ಹೋಗಿತ್ತು ಎಂದಿದ್ದಾರೆ.

ಆದರೆ ಛಲ ಬಿಡದ ಪಂತ್ 635 ದಿನಗಳ ನಿರಂತರ ಹೋರಾಟ, ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಪುನಶ್ಚೇತನದ ಬಳಿಕ ಸಂಪೂರ್ಣವಾಗಿ ಗಾಯಮುಕ್ತಗೊಂಡು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.

ಕಾರು ಮಗುಚಿ ಬೆಂಕಿ ಹೊತ್ತಿಕೊಂಡಂತಹ ಇಂತಹ ಘಟನೆಗಳಲ್ಲಿ ಸಾವು ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚಾಗಿದೆ. ಆದರೆ ಈ ಭಯಾನಕ ಅಪಘಾತದಿಂದ ಪಾರಾಗಿದ್ದು ಪಂತ್ ಅವರ ಅದೃಷ್ಟವೇ ಸರಿ ಎಂದಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಪಂತ್ ಶತಕ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.