
ತನುಷ್ ಕೋಟ್ಯನ್ ಅವರನ್ನು ಅಭಿನಂದಿಸುತ್ತಿರುವ ಸಹ ಆಟಗಾರರು
(ಪಿಟಿಐ ಚಿತ್ರ)
ಬೆಂಗಳೂರು: ನಾಯಕನ ಆಟವಾಡಿದ ರಿಷಭ್ ಪಂತ್ ಅವರ ಸಮಯೋಚಿತ ಅರ್ಧಶತಕದ (90) ಬೆಂಬಲದೊಂದಿಗೆ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ವಿರುದ್ಧ ನಡೆದ ನಾಲ್ಕು ದಿನಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಬಿಸಿಸಿಐ ಶ್ರೇಷ್ಠತಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ದಿನದಾಟದಲ್ಲಿ 275 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತ 73.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಪಂತ್ 113 ಎಸೆತಗಳಲ್ಲಿ 90 ರನ್ ಗಳಿಸಿ (11 ಬೌಂಡರಿ, 4 ಸಿಕ್ಸರ್) ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಲ್ಲದೆ ಟೀಮ್ ಇಂಡಿಯಾಕ್ಕೆ ಪುನರಾಗಮನಕ್ಕೂ ಮುನ್ನ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರು.
ಒಂದು ಹಂತದಲ್ಲಿ 215ಕ್ಕೆ ಏಳು ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಭೀತಿಯಲ್ಲಿತ್ತು. ಆದರೆ ಮುರಿಯದ ಎಂಟನೇ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ಕಟ್ಟಿದ ಅಂಶುಲ್ ಕಂಬೋಜ್ ಹಾಗೂ ಮಾನವ್ ಸುತಾರ್ ಭಾರತಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಡಲು ನೆರವಾದರು.
ಕಂಬೋಜ್ ಅಜೇಯ 37 ಹಾಗೂ ಸುತಾರ್ ಅಜೇಯ 20 ರನ್ ಗಳಿಸಿದರು. ಈ ಮೊದಲು ಆಯುಷ್ ಬಡೋನಿ 32, ತನುಷ್ ಕೋಟ್ಯನ್ 23 ಹಾಗೂ ರಜತ್ ಪಾಟೀದಾರ್ 28 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ದಕ್ಷಿಣ ಆಫ್ರಿಕಾದ 309 ರನ್‌ಗಳಿಗೆ ಉತ್ತರವಾಗಿ ಭಾರತ 234 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 75 ರನ್‌ಗಳ ಹಿನ್ನಡೆಗೊಳಗಾಗಿತ್ತು.
ತನುಷ್ (4 ವಿಕೆಟ್) ಹಾಗೂ ಕಂಬೋಜ್ (3 ವಿಕೆಟ್) ನಿಖರ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ಎ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 199 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಎ ತಂಡವು ಯಶಸ್ವಿಯಾಗಿತ್ತು. ಆಲ್‌ರೌಂಡ್ ಪ್ರದರ್ಶನ ನೀಡಿದ ತನುಷ್ ಕೋಟ್ಯನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ 'ಎ' ತಂಡದ ಆಟಗಾರರ ಸಂಭ್ರಮ