ADVERTISEMENT

IND vs AUS | ತಲೆಗೆ ಪೆಟ್ಟು: ಎರಡನೇ ಏಕದಿನ ಪಂದ್ಯಕ್ಕೆ ರಿಷಭ್ ಪಂತ್‌ ಅಲಭ್ಯ

ಪಿಟಿಐ
Published 16 ಜನವರಿ 2020, 6:46 IST
Last Updated 16 ಜನವರಿ 2020, 6:46 IST
   

ಮುಂಬೈ : ರಾಜಕೋಟ್‌ನಲ್ಲಿ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಗಾಯಾಳು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಮುಂಬೈನಲ್ಲಿ ಮಂಗಳವಾರ ಮೊದಲ ಪಂದ್ಯದ ವೇಳೆ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಬೌನ್ಸರ್‌ ಹೆಲ್ಮೆಟ್‌ಗೆ ಅಪ್ಪಳಿಸಿದ ಕಾರಣ ಅವರು ಗಾಯಗೊಂಡಿದ್ದರು.

‌ಭಾರತ ತಂಡ ಬುಧವಾರ ರಾಜಕೋಟ್‌ಗೆ ಬಂದಿಳಿಯಿತು. ಇನ್ನೊಂದೆಡೆ ಪಂತ್‌, ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ತೆರಳಲಿದ್ದಾರೆ.

ADVERTISEMENT

ಗಾಯಾಳುಗಳಿಗೆ (ಕಂಕಷನ್‌) ಸಂಬಂಧಿಸಿ ಐಸಿಸಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ ಮೇಲೆ ಅವರು ಪಂದ್ಯಕ್ಕೆ ಅಲಭ್ಯರಾದ ದೇಶದ ಮೊದಲ ಅಂತರರಾಷ್ಟ್ರೀಯ ಆಟಗಾರ ಎನಿಸಿದರು.

‘ಪಂತ್‌ ಎರಡನೇ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಬೆಂಗಳೂರಿನ ಅಕಾಡೆಮಿಯಲ್ಲಿ ಅವರು ಆರೈಕೆ ವೇಳೆ ಹೇಗೆಸ್ಪಂದಿಸುತ್ತಾರೆ ಎಂಬುದರ ಮೇಲೆ, ಮೂರನೇ ಪಂದ್ಯದಲ್ಲಿ ಅವರು ಆಡುವ ನಿರ್ಧಾರ ಆಗಲಿದೆ’ ಎಂದು ಹೇಳಿಕೆ ತಿಳಿಸಿದೆ.

ಮೂರನೇ ಪಂದ್ಯ ಜನವರಿ 19ರಂದು ಬೆಂಗಳೂರಿನಲ್ಲೇ ನಡೆಯಲಿರುವುದರಿಂದ, ಮುಂದಿನ 72 ಗಂಟೆಗಳ ನಂತರ ಅವರ ಲಭ್ಯತೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಪಂತ್‌ ಮುಂಬೈನಲ್ಲಿ 33 ಎಸೆತಗಳಲ್ಲಿ 28 ರನ್‌ ಗಳಿಸಿದ್ದರು. ಗಾಯಾಳಾದ ಕಾರಣ ರಾಹುಲ್ ವಿಕೆಟ್‌ ಕೀಪಿಂಗ್ ಮಾಡಿದ್ದು, ಮನಿಷ್‌ ಪಾಂಡೆ ಬದಲಿ ಆಟಗಾರನಾಗಿ ಕಣಕ್ಕೆ ಇಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.