ADVERTISEMENT

ಡಿಡಿಸಿಎ ಚುನಾವಣೆ: ರೋಹನ್ ಜೇಟ್ಲಿ, ಗುಲಾಟಿ ನಾಮಪತ್ರ ಸಲ್ಲಿಕೆ

ಪಿಟಿಐ
Published 7 ಅಕ್ಟೋಬರ್ 2020, 16:57 IST
Last Updated 7 ಅಕ್ಟೋಬರ್ 2020, 16:57 IST
   

ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಮಗ ರೋಹನ್ ದೆಹಲಿ ಡಿಸ್ಟ್ರಿಕ್ಟ್ಸ್‌ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಸೋದರಮಾವ ಪವನ್ ಗುಲಾಟಿ ಅವರು ಖಜಾಂಚಿ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ‌

ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಅರುಣ್ ಜೇಟ್ಲಿ ಅವರು ಹೋದ ವರ್ಷ ನಿಧನರಾಗಿದ್ದರು. ಕೆಲವು ವರ್ಷಗಳ ಹಿಂದೆ ಡಿಡಿಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರ ಹಾದಿಯಲ್ಲಿ ಮಗ ರೋಹನ್ ಇದ್ದಾರೆ.

ADVERTISEMENT

‘ಇವತ್ತು ನಾಮಪತ್ರ ಸಲ್ಲಿಸಿದ್ದೇನೆ. ಡಿಡಿಸಿಎ ಸುಧಾರಣೆಗೆ ಕಾರ್ಯನಿರ್ವಹಿಸುವ ಗುರಿ ನನ್ನದು. ಈ ಸಂಸ್ಥೆಯ ಘನತೆಯನ್ನು ಮರಳಿ ಗಳಿಸಿಕೊಡುವುದು ನನ್ನ ಧ್ಯೇಯ. ಸದಸ್ಯರು ನನ್ನನ್ನು ಬೆಂಬಲಿಸುತ್ತಾರೆ’ ಎಂದು 31 ವರ್ಷದ ರೋಹನ್ ಭರವಸೆ ವ್ಯಕ್ತಪಡಿಸಿದರು.

ಈ ಮುಂಚೆ ಅಧ್ಯಕ್ಷಸ್ಥಾನದ ಸ್ಪರ್ಧಿಯಾಗಿದ್ದ ಸುನೀಲ್ ಗೋಯೆಲ್ ಅವರು ತಮ್ಮ ನಾಮಪತ್ರ ಮರಳಿ ಪಡೆದಿದ್ದಾರೆ. ಆದ್ದರಿಂದ ಈಗ ಕಣದಲ್ಲಿ ರೋಹನ್ ಒಬ್ಬರೇ ಉಳಿದಂತಾಗಿದೆ. ಅವರು ವೃತ್ತಿಯಿಂದ ವಕೀಲರಾಗಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಇರುವುದು ಒಳ್ಳೆಯದು. ಉತ್ತಮ ವ್ಯಕ್ತಿಗಳನ್ನು ಆಡಳಿತಕ್ಕೆ ತರಲು ಇದು ಅವಶ್ಯಕ’ ಎಂದು ರೋಹನ್ ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.