ನ್ಯೂಯಾರ್ಕ್: ಇಲ್ಲಿನ ನೂತನ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್‌ನ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 60 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಹೊಸ ಮೈದಾನದಲ್ಲಿ ಮೊದಲ ದಿನವೇ ಭದ್ರತಾ ವೈಫಲ್ಯ ಸಂಭವಿಸಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿದ್ದಾನೆ. ಬಾಂಗ್ಲಾದೇಶದ ಚೇಸಿಂಗ್ ವೇಳೆ ಈ ಘಟನೆ ನಡೆದಿದೆ. ಮೈದಾನಕ್ಕೆ ನುಗ್ಗಿದ ಅಭಿಮಾನಿ ರೋಹಿತ್ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾನೆ. ಬಳಿಕ, ಆತನನ್ನು ಹಿಡಿದು ನೆಲಕ್ಕೆ ಕೆಡವಿದ ಪೊಲೀಸರು ಬೇಡಿ ಹಾಕಿಕೊಂಡು ಕರೆದೊಯ್ದಿದ್ದಾರೆ.
ಈ ನಡುವೆ, ಅಭಿಮಾನಿಗಳ ಜೊತೆ ಕಠಿಣವಾಗಿ ವರ್ತಿಸಬೇಡಿ, ಅವರಿಗೆ ನೋವು ಮಾಡಬೇಡಿ ಎಂದು ರೋಹಿತ್ ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ರಿಷಭ್ ಪಂತ್ ಅವರ 53 ರನ್, ಹಾರ್ದಿಕ್ ಪಾಂಡ್ಯ ಗಳಿಸಿದ 40 ರನ್ ನೆರವಿನಿಂದ 182 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾ ತಂಡವು 20 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ತಂಡವು ಟಿ–20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯಲ್ಲಿ ಇದೇ ಮೈದಾನದಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.