ADVERTISEMENT

ಮಧ್ಯಮ ವೇಗದ ಬೌಲಿಂಗ್ ಮಾಡಿದ ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 9:40 IST
Last Updated 15 ಜನವರಿ 2021, 9:40 IST
ಕ್ರಿಕೆಟ್ ಡಾಟ್ ಕಾಮ್ ಎಯು ಟ್ವೀಟ್ ವಿಡಿಯೊ ಸ್ಕ್ರೀನ್ ಶಾಟ್
ಕ್ರಿಕೆಟ್ ಡಾಟ್ ಕಾಮ್ ಎಯು ಟ್ವೀಟ್ ವಿಡಿಯೊ ಸ್ಕ್ರೀನ್ ಶಾಟ್   

ಬ್ರಿಸ್ಬೇನ್:ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಹಲವು ವಿಶೇಷಗಳಿಗೆಸಾಕ್ಷಿಯಾಗಿದೆ. ವಾಷಿಂಗ್ಟನ್ ಸುಂದರ್ ಮತ್ತು ಟಿ. ನಟರಾಜನ್ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೆ, ರೋಹಿತ್ ಶರ್ಮಾ ಮಧ್ಯಮ ವೇಗದ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು.

ಈ ಹಿಂದೆ ಬೌಲಿಂಗ್ ಅವಕಾಶ ಸಿಕ್ಕಾಗಲೆಲ್ಲ ಆಫ್ ಸ್ಪಿನ್ ಬೌಲಿಂಗ್ ಮಾಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಇವತ್ತು ಮಧ್ಯಮ ವೇಗದ ಬೌಲಿಂಗ್ ಮಾಡುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ನೀಡಿದ್ದಾರೆ. ತೊಡೆ ಸಂದು.ನೋವಿನಿಂದ ಮೈದಾನದಿಂದ ಹೊರನಡೆದ ನವ್‌ದೀಪ್ ಸೈನಿ ಓವರನ್ನು ಪೂರ್ಣಗೊಳಿಸಲು ಚೆಂಡನ್ನು ಕೈಗೆತ್ತಿಕೊಂಡ ರೋಹಿತ್, ಮಧ್ಯಮ ವೇಗದ ಬೌಲಿಂಗ್ ಮಾಡಿದರು. ರೋಹಿತ್ ಎಸೆದ ಆಫ್ ಟ್ರ್ಯಾಕರ್ ಎಸೆತವನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ ಆಫ್ ಸೈಡ್‌ಗೆ ತಳ್ಳಿ ಒಂದು ರನ್ ಪಡೆದಿದ್ದಾರೆ.

ಈ ವಿಡಿಯೊವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ADVERTISEMENT

ಮೈದಾನದಿಂದ ಹೊರ ಹೋಗುವುದಕ್ಕೂ ಮುನ್ನ ಸೈನಿ, ಲ್ಯಾಬುಸ್ಚಾಗ್ನೆ ಅವರನ್ನು ಕ್ಯಾಚ್ ಬಲೆಗೆ ಕೆಡವಿದ್ದರು. ಆದರೆ, ಗಲ್ಲಿಯಲ್ಲಿ ಅಜಿಂಕ್ಯ ರಹಾನೆ ಕ್ಯಾಚ್ ಕೈಚೆಲ್ಲಿದ್ದರು.

ಇದಾದ ಬಳಿಕ, ಸೈನಿ ಅಸ್ವಸ್ಥರಾದಂತೆ ಕಂಡುಬಂದರು. ಈ ಸಂದರ್ಭ ಮೈದಾನಕ್ಕೆ ಬಂದ ಫಿಸಿಯೋ ನಿತಿನ್ ಪಟೇಲ್ ಸೈನಿ ಅವರನ್ನು ಪರೀಕ್ಷಿಸಿ ಪೆವಿಲಿಯನ್‌ಗೆ ಕರೆದೊಯ್ದರು.

ಡ್ರಿಂಕ್ಸ್ ವಿರಾಮದ ಬಳಿಕ ಸೈನಿ ಮೈದಾನಕ್ಕೆ ವಾಪಸ್ ಆಗಲಿಲ್ಲ. ಹಾಗಾಗಿ, ಭಾರತಕ್ಕೆ ಗಾಯಾಳುಗಳ ಸಮಸ್ಯೆ ಮತ್ತಷ್ಟು ಹೆಚ್ಚಾದಂತಾಗಿದೆ. ಕೆಲ ಅನನುಭವಿ ಬೌಲರ್‌ಗಳ ಜೊತೆ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಆಡುತ್ತಿದೆ.

ಪಂದ್ಯದ ಆರಂಭಕ್ಕೂ ಮುನ್ನ, ಟಿ.ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇದರ ಜೊತೆಗೆ ಒಂದು ಟೆಸ್ಟ್ ಆಡಿರುವ ಶಾರ್ದೂಲ್ ಠಾಕೂರ್ ಜೊತೆ 4 ಬದಲಾವಣೆ ಮಾಡಿ ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾ ಮೈದಾನಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.