ADVERTISEMENT

ಟಿ–20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್: ಯುವಿ ದಾಖಲೆ ಮುರಿದ ರೋಹಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2022, 10:21 IST
Last Updated 27 ಅಕ್ಟೋಬರ್ 2022, 10:21 IST
   

ಸಿಡ್ನಿ: ಟಿ–20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ.

ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ, ಟಿ–20 ವಿಶ್ವಕಪ್‌ನಲ್ಲಿ ಒಟ್ಟಾರೆ 34 ಸಿಕ್ಸರ್ ಸಿಡಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್ ಹೊಡೆದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು. 33 ಸಿಕ್ಸರ್ ಸಿಡಿಸಿದ್ದ ಯುವರಾಜ್ ಸಿಂಗ್ ದಾಖಲೆಯನ್ನು ಅಳಿಸಿಹಾಕಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಕೆ.ಎಲ್. ರಾಹುಲ್ 2ನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ, ಒಂದಾದ ರೋಹಿತ್ ಶರ್ಮಾ–ವಿರಾಟ್ ಕೊಹ್ಲಿ ಜೋಡಿ ಎಚ್ಚರಿಕೆಯ ಆಟ ಆಡಿದರು. ಕೆ.ಎಲ್. ರಾಹುಲ್ ಔಟಾದ ಓವರ್‌ನಲ್ಲೇ ವೇಗಿ ವ್ಯಾನ್ ಮೀಕ್ರನ್ ಎಸೆತದಲ್ಲಿ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಗುರಿ ಏನೆಂಬುದರ ಸೂಚನೆ ನೀಡಿದರು.

ADVERTISEMENT

ಸ್ಕ್ವೇರ್ ಲೆಗ್ ಆಫ್‌ನಲ್ಲಿ ಬಾಸ್ ಡಿ ಲೀಡೆ ಅವರ ಎಸೆತವನ್ನು ಫುಲ್ ಶಾಟ್ ಮೂಲಕ ಬೌಂಡರಿ ದಾಟಿಸಿದರು. 10ನೇ ಓವರ್‌ನಲ್ಲಿ ಮೂರನೇ ಸಿಕ್ಸರ್ ಸಿಡಿಸುವ ಮೂಲಕ ಯುವರಾಜ್ ದಾಖಲೆಯನ್ನು ರೋಹಿತ್ ಮುರಿದರು. 12ನೇ ಓವರ್‌ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್ ಶರ್ಮಾ ಕ್ಲಾಸೆನ್‌ಗೆ ವಿಕೆಟ್ ಒಪ್ಪಿಸಿದರು. 39 ಎಸೆತಗಳಲ್ಲಿ 53 ರನ್ ಗಳಿಸಿದ ಅವರು ತಂಡದ ಉತ್ತಮ ಮೊತ್ತಕ್ಕೆ ನೆರವಾದರು.

ಈ ಹಿಂದಿನ ವೈಫಲ್ಯಗಳನ್ನು ಮೀರಿ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.