ADVERTISEMENT

IND vs ENG: ಪೂಜಾರ ಅರ್ಧಶತಕ, ಹಿತ ತಂದ ರೋಹಿತ್ ಶತಕ

ಇಂಗ್ಲೆಂಡ್ ಎದುರಿನ 4ನೇ ಟೆಸ್ಟ್‌: ರಾಹುಲ್ ದಿಟ್ಟ ಆಟ

ಏಜೆನ್ಸೀಸ್
Published 4 ಸೆಪ್ಟೆಂಬರ್ 2021, 20:52 IST
Last Updated 4 ಸೆಪ್ಟೆಂಬರ್ 2021, 20:52 IST
ಶತಕ ಗಳಿಸಿದ ರೋಹಿತ್ ಶರ್ಮಾ (ಎಡ) ಅವರು ಚೇತೇಶ್ವರ್ ಪೂಜಾರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ
ಶತಕ ಗಳಿಸಿದ ರೋಹಿತ್ ಶರ್ಮಾ (ಎಡ) ಅವರು ಚೇತೇಶ್ವರ್ ಪೂಜಾರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ   

ಲಂಡನ್‌: ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟು ಸಂಕಷ್ಟಕ್ಕೆ ಒಳಗಾಗಿದ್ದ ಭಾರತಕ್ಕೆ ರೋಹಿತ್ ಶರ್ಮಾ ಅವರ ‘ಮೊದಲ’ ಶತಕ ಮತ್ತು ಚೇತೇಶ್ವರ್ ಪೂಜಾರ ಅವರ ಅರ್ಧಶತಕ ಚೇತರಿಕೆ ತುಂಬಿತು.

ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯದ ಮೂರನೇ ದಿನ ರೋಹಿತ್‌ (127; 256 ಎ, 14 ಬೌಂಡರಿ, 1 ಸಿಕ್ಸರ್‌) ಮತ್ತು ಪೂಜಾರ (61; 126 ಎ, 9 ಬೌಂ) ಅವರ ದಿಟ್ಟ ಆಟ ಭಾರತಕ್ಕೆ ಮಹತ್ವದ 171 ರನ್‌ಗಳ ಮುನ್ನಡೆ ತಂದುಕೊಟ್ಟಿತು.

ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್ (46; 101 ಎ, 6 ಬೌಂ, 1 ಸಿ) ಕೂಡ ಉತ್ತಮ ಕಾಣಿಕೆ ನೀಡಿದರು. ಇದರ ಪರಿಣಾಮ ತಂಡ ಶನಿವಾರದ ದಿನದಾಟದ ಕೊನೆಗೆ 92 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 270 ರನ್‌ ಗಳಿಸಿದೆ.

ADVERTISEMENT

ಮಂದ ಬೆಳಕಿನ ಕಾರಣ ದಿನದಾಟವನ್ನು ನಿಗದಿಗಿಂತ ಬೇಗ ಕೊನೆಗೊಳಿಸಲಾಯಿತು.

ಆತಿಥೇಯರಿಗೆ 99 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ನೀಡಿದ ಭಾರತ ಎರಡನೇ ದಿನವಾದ ಶುಕ್ರವಾರ ವಿಕೆಟ್ ಕಳೆದುಕೊಳ್ಳದೆ 43 ರನ್ ಗಳಿಸಿತ್ತು. ಶನಿವಾರ ರೋಹಿತ್ ಮತ್ತು ರಾಹುಲ್ ಅಮೋಘ ಆಟವಾಡಿ ಮುನ್ನಡೆಯನ್ನು ಚುಕ್ತಾ ಮಾಡುವತ್ತ ಹೆಜ್ಜೆ ಹಾಕಿದ್ದರು. ಆದರೆ ತಂಡದ ಮೊತ್ತ 83 ರನ್‌ಗಳಾಗಿದ್ದಾಗ ರಾಹುಲ್ ಮರಳಿದರು. ಈ ಸಂದರ್ಭದಲ್ಲಿ ಕಾಡಿದ್ದ ಆತಂಕವನ್ನು ಚೇತೇಶ್ವರ ಪೂಜಾರ ದೂರ ಮಾಡಿದರು.

ಚಹಾ ವಿರಾಮದ ವೇಳೆ ರೋಹಿತ್ ಮತ್ತು ಪೂಜಾರ ಎರಡನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ಆಡಿ ತಂಡಕ್ಕೆ 100 ರನ್‌ಗಳ ಮುನ್ನಡೆ ಗಳಿಸಿಕೊಟ್ಟರು. ವಿರಾಮಕ್ಕೆ ತೆರಳುವ ಸ್ವಲ್ಪ ಮೊದಲು ರೋಹಿತ್ ಶರ್ಮಾ ಶತಕ ಪೂರೈಸಿದರು. ವಿದೇಶಿ ನೆಲದಲ್ಲಿ ಆಡಿದ 25 ಪಂದ್ಯಗಳಲ್ಲಿ ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ. ಒಟ್ಟಾರೆ 43 ಪಂದ್ಯಗಳಲ್ಲಿ ಎಂಟನೇ ಶತಕ.

ರೋಹಿತ್ ಅರ್ಧಶತಕ ಪೂರೈಸಲು 145 ಎಸೆತ ವ್ಯಯಿಸಿದರು. ಇದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಅತ್ಯಂತ ನಿಧಾನದ ಅರ್ಧಶತಕವಾಗಿದೆ. 59 ಎಸೆತಗಳಲ್ಲಿ ಮುಂದಿನ 50 ರನ್ ಗಳಿಸಿ ಶತಕ ಬಾರಿಸಿದರು. ಪೂಜಾರ ಮೋಹಕ ಆಟ: ಪೂಜಾರ ಆರಂಭದಿಂದಲೇ ಮೋಹಕ ಹೊಡೆ ತಗಳ ಮೂಲಕ ಮಿಂಚಿದರು. ಚಹಾ ವಿರಾಮಕ್ಕೆ ತೆರಳುವಾಗ 48 ರನ್‌ ಗಳಿಸಿದ್ದ ಅವರು ನಂತರ ಅರ್ಧಶತಕ ಗಳಿಸಿ ಸಂಭ್ರಮಿಸಿದರು. ಸರಣಿಯಲ್ಲಿ ಈಗಾಗಲೇ ಎರಡು ಅರ್ಧಶತಕ ಗಳಿಸಿರುವ ರೋಹಿತ್ ದಿನದಾಟದ ಮೊದಲ ಓವರ್‌ನ ಆರನೇ ಎಸೆತದಲ್ಲಿ ಜೇಮ್ಸ್ ಆ್ಯಂಡರ್ಸನ್ ಅವರನ್ನು ಬೌಂಡರಿಗೆ ಅಟ್ಟಿದರು. ನಂತರ ಆಗಾಗ ಬೌಂಡರಿಗಳು ಹರಿದು ಬಂದವು. ಕ್ರಿಸ್ ವೋಕ್ಸ್ ಎಸೆತವನ್ನು ಹುಕ್‌ ಮಾಡಿಲಾಂಗ್‌ ಲೆಗ್‌ ಮೇಲಿಂದ ಸಿಕ್ಸರ್‌ಗೆ ಅಟ್ಟಿದ ರಾಹುಲ್ 41 ರನ್ ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಯಿಂದ ತಪ್ಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.