ADVERTISEMENT

ಬಯೊ ಬಬಲ್‌ನಲ್ಲಿ ‘ಸರಣಿ’ ಸವಾಲು

ಆಸ್ಟ್ರೇಲಿಯಾ ಎದುರು ಭಾರತ ತಂಡದ ಕ್ರಿಕೆಟ್ ಹಣಾಹಣಿ: ಸಿಡ್ನಿಯಲ್ಲಿ ಇಂದು ಮೊದಲ ಏಕದಿನ ಪಂದ್ಯ

ಪಿಟಿಐ
Published 26 ನವೆಂಬರ್ 2020, 15:41 IST
Last Updated 26 ನವೆಂಬರ್ 2020, 15:41 IST
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   

ಸಿಡ್ನಿ: ನಗರ ಹೊರವಲಯದಲ್ಲಿ 14 ದಿನ ’ಲಘು ಕ್ವಾರಂಟೈನ್‌ನ‘ನಲ್ಲಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಆಟಗಾರರು ಗುರುವಾರ ನಗರದ ಒಳಗಿನ ಹೋಟೆಲ್‌ನಲ್ಲಿ ‘ಚೆಕ್‌ ಇನ್‌’ ಆಗುವುದರೊಂದಿಗೆ ಜೀವಸುರಕ್ಷಾ ವಲಯ (ಬಯೊಬಬಲ್‌) ಪ್ರವೇಶಿಸಿದರು. ಈ ಮೂಲಕ ಬಹುನಿರೀಕ್ಷಿತ ಸರಣಿಗಳಿಗೆ ಅಂತಿಮ ಸಿದ್ಧತೆ ಪೂರ್ಣಗೊಂಡಿತು. ಶುಕ್ರವಾರ ಇಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯದೊಂದಿಗೆ ಆತಿಥೇಯ ಆಸ್ಟ್ರೇಲಿಯಾ ಎದುರಿನ ಮೂರೂ ಮಾದರಿಯ ಸರಣಿಗಳು ಆರಂಭವಾಗಲಿವೆ.

ಕೋವಿಡ್‌–19ರ ಕಾರಣ ಮಾರ್ಚ್ ನಂತರ ಕ್ರೀಡಾಂಗಣದಿಂದ ದೂರಗಿದ್ದ ಭಾರತ ತಂಡದ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡಿ ಇಲ್ಲಿಗೆ ಬಂದಿದ್ದರು. ಕ್ವಾರಂಟೈನ್‌ನಲ್ಲಿದ್ದಾಗಲೂ ಅಭ್ಯಾಸಕ್ಕೆ ಅವಕಾಶ ಲಭಿಸಿದ್ದರಿಂದ ಉತ್ತಮ ತಾಲೀಮು ನಡೆಸಿ ಆಸ್ಟ್ರೇಲಿಯಾದ ಸವಾಲಿಗೆ ಸಜ್ಜಾಗಿದ್ದಾರೆ. ಕ್ರಿಕೆಟ್ ಸರಣಿಗಳಿಗೆ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೂ ಅವಕಾಶ ನೀಡಿರುವುದರಿಂದ ಆಟಗಾರರು ಹುರುಪಿನಲ್ಲಿದ್ದಾರೆ.

ಕೋವಿಡ್ ಕಾಲದಲ್ಲಿ ಭಾರತ ತಂಡ ಪಾಲ್ಗೊಳ್ಳುತ್ತಿರುವ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದೆ. ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆಡಲು ಇಳಿಯಬೇಕಾಗಿರುವ ಭಾರತ ತಂಡಕ್ಕೆ ಇದು ಹೊಸ ಅನುಭವ. ತಂಡದ ಜೆರ್ಸಿಯ ಬಣ್ಣದಲ್ಲೂ ಬದಲಾವಣೆಯಾಗಿದ್ದು ಬ್ಲೂ ಬಾಯ್ಸ್‌ ಇಲ್ಲಿ ‘ರೆಟ್ರೊ ಬ್ಲೂ‘ನಲ್ಲಿ ವಿಜೃಂಭಿಸಲಿದ್ದಾರೆ. ಆದರೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಮೆಟ್ಟಿನಿಲ್ಲಲು ತಂಡ ಯಾವ ತಂತ್ರಗಳಿಗೆ ಮೊರೆ ಹೋಗಲಿದೆ ಎಂಬ ಕುತೂಹಲ ಕ್ರಿಕೆಟ್ ವಲಯವನ್ನು ಕಾಡತೊಡಗಿದೆ.

ADVERTISEMENT

ಗಾಯದಿಂದ ಚೇತರಿಸಿಕೊಳ್ಳದ ಅನುಭವಿ ಆಟಗಾರ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಸರಣಿಗೆ ಲಭ್ಯವಿಲ್ಲ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳ ವೇಳೆ ಭಾರತಕ್ಕೆ ವಾಪಸಾಗಲಿದ್ದಾರೆ. ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಫಿಟ್‌ನೆಸ್‌ ಕುರಿತ ಸಂದೇಹಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಗಲಿಲ್ಲ. ಈ ಕಾರಣಗಳಿಂದ ಅಂತಿಮ 11ರ ಆಯ್ಕೆ ಸಂದರ್ಭದಲ್ಲಿ ತಂಡದ ಆಡಳಿತ ಯಾವ ಸೂತ್ರಕ್ಕೆ ಮೊರೆಹೋಗಲಿದೆ ಎಂಬ ಕುತೂಹಲವೂ ಇದೆ. ಮಿಷೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್ ಅವರಂಥ ವೇಗಿಗಳನ್ನು ಎದುರಿಸುವ ಸವಾಲು ಆರಂಭಿಕ ಜೋಡಿಗೆ ಇದೆ. ಆದ್ದರಿಂದ ಶಿಖರ್‌ ಧವನ್ ಜೊತೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಮಯಂಕ್ ಅಗರವಾಲ್‌ಗೆ ಸಿಗುವುದೋ ಅಥವಾ ಶುಭಮನ್ ಗಿಲ್ ಹೆಗಲಿಗೆ ಬೀಳುವುದೋ ಎಂಬ ಪ್ರಶ್ನೆ ಎದ್ದಿದೆ. ಆ್ಯಡಂ ಜಂಪಾ ಅವರ ಸ್ಪಿನ್‌ ದಾಳಿ ಎದುರಿಸಿ ರನ್ ಕಲೆ ಹಾಕುವ ಹೊಣೆ ವಿರಾಟ್ ಕೊಹ್ಲಿ ಒಳಗೊಂಡ ಮಧ್ಯಮ ಕ್ರಮಾಂಕಕ್ಕೆ ಇದೆ.

ಸ್ಮಿತ್‌, ವಾರ್ನರ್‌ಗೆ ಬ್ರೇಕ್ ಹಾಕುವ ಸವಾಲು

ಉತ್ತಮ ಲಯದಲ್ಲಿರುವ ಸ್ಟೀವ್ ಸ್ಮಿತ್, ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್‌, ಭವಿಷ್ಯದ ತಾರೆ ಮಾರ್ನಸ್ ಲಾಬುಶೇನ್ ಮುಂತಾದವರನ್ನು ಒಳಗೊಂಡ ಬ್ಯಾಟಿಂಗ್ ಲೈನ್‌ ಅಪ್‌ಗೆ ಮದ್ದು ಅರೆಯಲು ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶರ್ದೂಲ್ ಠಾಕೂರ್ ಹಾಗೂ ನವದೀಪ್ ಸೈನಿ ಪ್ರಯತ್ನಿಸಬೇಕಾಗಿದೆ. ಉಪನಾಯಕನ ಪಟ್ಟಕ್ಕೇರಿರುವ ಕೆ.ಎಲ್‌.ರಾಹುಲ್ ಅವರಿಗೆ ವಿಕೆಟ್ ಕಾಯುವ ಜವಾಬ್ದಾರಿಯೂ ಇದೆ. ಯಜುವೇಂದ್ರ ಚಾಹಲ್ ಅವರ ಗೂಗ್ಲಿ ಗತಿಯನ್ನು ನಿರ್ಣಯಿಸಿ ಸೂಕ್ತ ರೀತಿಯಲ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ರಾಹುಲ್‌ಗೆ ಸಾಧ್ಯವಾದರೆ ತಂಡಕ್ಕೆ ಲಾಭ ಆಗಲಿದೆ. ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಮಿಂಚಬಲ್ಲ ಹಾರ್ದಿಕ್ ಪಾಂಡ್ಯ ಹಾಗೂ ಮಧ್ಯಮ ಕ್ರಮಾಂಕದಲ್ಲಿ ರನ್‌ ಗಳಿಸಿಕೊಡಬಲ್ಲ ಶ್ರೇಯಸ್ ಅಯ್ಯರ್ ತಂಡದ ಭರವಸೆಯಾಗಿದ್ದಾರೆ.

ಭಾರತ ತಂಡದ ಆಟಗಾರರು ನಿರಾಳ

ಜೀವಸುರಕ್ಷಾ ವ್ಯವಸ್ಥೆಯೊಳಗೆ ಪ್ರವೇಶಿಸಿದ ನಂತರ ಭಾರತದ ಆಟಗಾರರು ನಿರಾಳವಾಗಿದ್ದಾರೆ. ಕ್ವಾರಂಟೈನ್‌ನಲ್ಲಿದ್ದಾಗ ಅವರು ಅಭ್ಯಾಸದ ಸಂದರ್ಭದಲ್ಲಿ ಮಾತ್ರ ಪರಸ್ಪರ ಭೇಟಿಯಾಗುತ್ತಿದ್ದರು. ಕ್ರೀಡಾಂಗಣಕ್ಕೆ ತೆರಳುವಾಗ ಮತ್ತು ವಾಪಸಾಗುವಾಗ ಬಸ್‌ನಲ್ಲಿ ಆಸನಗಳ ನಡುವೆ ಅಂತರವಿರಿಸಿ ಕುಳಿತುಕೊಳ್ಳಬೇಕಾಗಿತ್ತು. ಈಗ ಅವರು ಪರಸ್ಪರ ಭೇಟಿಯಾಗುವ ಮತ್ತು ಜೊತೆಯಲ್ಲಿ ಕುಳಿತು ಆಹಾರ ಸೇವಿಸುವ ಅವಕಾಶವಿದೆ. ಐಪಿಎಲ್ ಸಂದರ್ಭ ದುಬೈನಲ್ಲಿ ಮೂರು ತಿಂಗಳು ಬಯೊಬಬಲ್‌ನಲ್ಲಿದ್ದ ಆಟಗಾರರು ನೇರವಾಗಿ ಇಲ್ಲಿಗೆ ಬಂದಿದ್ದರು. ಆದ್ದರಿಂದ 14 ದಿನಗಳ ಕ್ವಾರಂಟೈನ್ ಅವಧಿ ಸವಾಲಿನದ್ದಾಗಿತ್ತು.

‘ಕೊಠಡಿಯಲ್ಲಿ ಒಬ್ಬರೇ ಕುಳಿತುಕೊಳ್ಳುತ್ತಿದ್ದಾಗ ಬೇಸರ ಕಾಡುತ್ತಿತ್ತು. ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಮತ್ತು ಅಲ್ಲಿ ಸಹ ಆಟಗಾರರನ್ನು ಭೇಟಿಯಾಗುತ್ತಿದ್ದ ವೇಳೆ ಖುಷಿಯಾಗುತ್ತಿತ್ತು. ವಾಪಸ್ ಕೊಠಡಿಗೆ ಬಂದ ಮೇಲೆ ಇನ್ನಷ್ಟು ಬೇಸರವಾಗುತ್ತಿತ್ತು‘ ಎಂದು ಕೆ.ಎಲ್‌.ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.