ADVERTISEMENT

ರೋಹಿತ್‌ ಟಿ20ಯಲ್ಲಿ ದ್ವಿಶತಕ ಹೊಡೆಯಬಲ್ಲರು

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಬ್ರಾಡ್‌ ಹಾಗ್‌ ಅಭಿಮತ

ಪಿಟಿಐ
Published 16 ಮಾರ್ಚ್ 2020, 20:15 IST
Last Updated 16 ಮಾರ್ಚ್ 2020, 20:15 IST
ಬ್ರಾಡ್‌ ಹಾಗ್‌
ಬ್ರಾಡ್‌ ಹಾಗ್‌   

ಸಿಡ್ನಿ: ‘ಭಾರತದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟಿ20 ಮಾದರಿ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವ ಸಾಮರ್ಥ್ಯವುಳ್ಳ ವಿಶ್ವದ ಏಕೈಕ ಬ್ಯಾಟ್ಸಮನ್‌’ ಎಂದು ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್‌ ಬ್ರಾಡ್‌ ಹಾಗ್‌ ಹೇಳಿದ್ದಾರೆ.

‘ಉತ್ತಮ ಸರಾಸರಿ, ಫೀಲ್ಡರ್‌ಗಳ ಮಧ್ಯದಿಂದ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಸಾಮರ್ಥ್ಯ ಗಮನಿಸಿದರೆ, ರೋಹಿತ್ ಈ ಸಾಧನೆ ಮಾಡಬಲ್ಲರು’ ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಹಾಗ್‌ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್‌ 2007ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಡರ್ಬನ್‌ನಲ್ಲಿ ನಡೆದ ಪಂದ್ಯದ ಮೂಲಕ ಟ್ವೆಂಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 94 ಪಂದ್ಯಗಳನ್ನು ಆಡಿರುವ ಅವರು 32.37ರ ಸರಾಸರಿಯಲ್ಲಿ 2,331 ರನ್‌ ಕಲೆಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 16 ಅರ್ಧಶತಕಗಳು ಸೇರಿವೆ. ಸ್ಟ್ರೈಕ್‌ ರೇಟ್‌ 137.68 ಎಂಬುದು ಗಮನಾರ್ಹ.

ADVERTISEMENT

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರನ್‌ ಫಿಂಚ್‌, 2018ರಲ್ಲಿ ಜಿಂಬಾಬ್ವೆ ಎದುರು ನಡೆದ ಪಂದ್ಯದಲ್ಲಿ 76 ಎಸೆತಗಳಲ್ಲಿ 172 ರನ್‌ ಹೊಡೆದು, ದ್ವಿಶತಕದ ದಾಖಲೆಗೆ ಸನಿಹದಲ್ಲಿದ್ದರು. ಇದು ಅಂತರರಾಷ್ಟ್ರೀಯ ಟ್ವೆಂಟಿ– 20ಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್.

ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಒಟ್ಟಾರೆ ಗರಿಷ್ಠ ರನ್‌ ಗಳಿಸಿದ ದಾಖಲೆ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಹೆಸರಿನಲ್ಲಿದೆ. 2013ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಅವರು 175 ರನ್‌ (66 ಎಸೆತ) ಹೊಡೆದಿದ್ದರು.

ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌ 118 ರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.