ADVERTISEMENT

ಜನಾಂಗೀಯ ದ್ವೇಷಕ್ಕೆ ಕಡಿವಾಣ ಹಾಕಲೂ ಒಗ್ಗಟ್ಟಾಗಿ ಅಭಿಯಾನ ಮಾಡಬೇಕು: ಸ್ಮಿತ್

ಪಿಟಿಐ
Published 9 ಜುಲೈ 2020, 7:53 IST
Last Updated 9 ಜುಲೈ 2020, 7:53 IST
ಲುಂಗಿ ಗಿಡಿ
ಲುಂಗಿ ಗಿಡಿ   

ಜೋಹಾನ್ಸ್‌ಬರ್ಗ್‌:ಜನಾಂಗೀಯ ತಾರತಮ್ಯವನ್ನು ಹೋಗಲಾಡಿಸಲು ಎಲ್ಲರೂ ಒಂದಾಗಿ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕ ಗ್ರೆಮ್ ಸ್ಮಿತ್ ಹೇಳಿದ್ದಾರೆ.

’ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಅರಿವು ಇದೆ. ಆದ್ದರಿಂದ ವರ್ಣದ್ವೇಷವನ್ನು ಹೋಗಲಾಡಿಸುವಲ್ಲಿ ನಾವೂ (ಸಿಎಸ್‌ಎ) ಕೂಡ ಕೈಜೋಡಿಸುತ್ತೇವೆ‘ ಎಂದು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಸ್ಮಿತ್ ಹೇಳಿದ್ದಾರೆ.

ಸೌತಾಂಪ್ಟನ್‌ನಲ್ಲಿ ಬುಧವಾರ ಆರಂಭವಾದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ’ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌‘ ಲೋಗೊ ಧರಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಆಟದ ಅಂಗಳದಲ್ಲಿ ಕ್ರಿಕೆಟಿಗರು ಒಂದು ಮಂಡಿಯೂರಿ, ಶರ್ಟ್ ಕಾಲರ್ ಏರಿಸಿ ಪ್ರತಿಭಟನೆ ಸೂಚಿಸಿದ್ದರು. ಈಚೆಗೆ ಅಮೆರಿಕದಲ್ಲಿ ನಡೆದ ಪೊಲೀಸ್ ದೌರ್ಜನ್ಯದಲ್ಲಿ ಆಫ್ರೊ –ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಸಾವಿಗೀಡಾದ ನಂತರ ಜನಾಂಗೀಯ ದ್ವೇಷದ ವಿರುದ್ಧ ಪ್ರತಿಭಟನೆ ಮತ್ತು ಅಭಿಯಾನಗಳು ನಡೆಯುತ್ತಿವೆ.

ADVERTISEMENT

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ ಅಭಿಯಾನಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಈಚೆಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಗಿಡಿ ಹೇಳಿದ್ದರು.

ಅವರ ಹೇಳಿಕೆಯನ್ನು ಸಮರ್ಥಿಸಿರುವ ಸ್ಮಿತ್, ’ನಾವೆಲ್ಲ ನಮ್ಮದೇ ಆದ ಪುಟ್ಟ ಪ್ರಪಂಚದಲ್ಲಿರುತ್ತೇವೆ. ಆದರೆ ಭವಿಷ್ಯದಲ್ಲಿ ನಾವೆಲ್ಲರೂ ಸಮೀಪ ಬರಬೇಕು, ಒಂದಾಗಬೇಕು. ಈ ಪಿಡುಗನ್ನು ತೊಡೆದು ಹಾಕಲು ಒಟ್ಟಾಗಿ ಕುಳಿತು ಅಭಿಯಾನ ರೂಪಿಸಬೇಕು. ಈ ವಿಷಯದಲ್ಲ ಲುಂಗಿ ಗಿಡಿ ನಿಲುವು ಸಮರ್ಥನೀಯ‘ ಎಂದಿದ್ದಾರೆ.

’ನಮ್ಮ ದೇಶದ ತಂಡದಲ್ಲಿ ಕಪ್ಪು ಮತ್ತು ಶ್ವೇತವರ್ಣಿಯ ಆಟಗಾರರಿಗೆ ಸಮಾನ ಗೌರವವಿದೆ. ಉತ್ತಮ ಹೊಂದಾಣಿಕೆ ಇದೆ. ಮಂಡೇಲಾ ದಿನದಂದು ನಾವು ತ್ರಿಟಿಸಿ ಪಂದ್ಯ ಆಯೋಜನೆಗೆ ಯೋಜಿಸಿದ್ದೇವೆ. ನಮ್ಮ ಪುರುಷ ಮತ್ತು ಮಹಿಳಾ ತಂಡಗಳೊಂದಿಗೆ ಚರ್ಚೆ ನಡೆಸುವ ಅಗತ್ಯ ಇದೆ‘ ಎಂದು ಸ್ಮಿತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.