ADVERTISEMENT

ಇಂಗ್ಲೆಂಡ್–ಪಾಕಿಸ್ತಾನ ಎರಡನೇ ಟೆಸ್ಟ್: ತಿರುಗೇಟು ನೀಡುವತ್ತ ಅಜರ್ ಪಡೆ ಚಿತ್ತ

ಏಜೆನ್ಸೀಸ್
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST
ಜೋ ರೂಟ್
ಜೋ ರೂಟ್   

ಸೌತಾಂಪ್ಟನ್: ಮೊದಲ ಪಂದ್ಯದಲ್ಲಿ ಸೋಲಿನ ಕಹಿಯ ಜೊತೆಗೆ ಟೀಕಾಪ್ರಹಾರಗಳಿಂದ ಬೇಸತ್ತಿರುವ ಪಾಕಿಸ್ತಾನ ತಂಡವು ಗುರುವಾರ ಇಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಪುಟಿದೇಳುವ ಛಲದಲ್ಲಿದೆ.

ಮ್ಯಾಂಚೆಸ್ಟರ್‌ನಲ್ಲಿ ಹೋದ ವಾರ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಿದ್ದ ಅಜರ್ ಅಲಿ ನಾಯಕತ್ವದ ಬಳಗವು ಇಂಗ್ಲೆಂಡ್ ಎದುರು ಮಂಡಿಯೂರಿತ್ತು. ಶಾನ್ ಮಸೂದ್ ಶತಕ ಮತ್ತು ಯಾಸೀರ್ ಶಾ ಅವರ ಅಮೋಘ ಬೌಲಿಂಗ್ ವ್ಯರ್ಥವಾಗಿತ್ತು. ಇದರಿಂದಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಅವರು ಅಲಿ ನಾಯಕತ್ವವನ್ನು ಟೀಕಿಸಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಜೋಸ್ ಬಟ್ಲರ್‌ ಅವರ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿಯೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿ ಜೋ ರೂಟ್ ಬಳಗವಿದೆ. ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ ಆಡುತ್ತಿಲ್ಲ. ಅದರಿಂದಾಗಿ ಜೇಮ್ಸ್‌ ಆ್ಯಂಡರ್ಸನ್ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಆದರೆ, ಅವರಿಗಿಂತ ಕಿರಿಯ,ಬೌಲರ್ ಸ್ಯಾಮ್ ಕರನ್ ಅವರಿಗೆ ಇಂಗ್ಲೆಂಡ್ ಮಣೆ ಹಾಕುತ್ತಿದೆ.

ADVERTISEMENT

ತಂಡದಲ್ಲಿರುವ ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್,, ಕ್ರಿಸ್ ವೋಕ್ಸ್‌ ಅವರು ಉತ್ತಮ ಲಯದಲ್ಲಿದ್ದಾರೆ. ಬ್ರಾಡ್ ಮತ್ತು ವೋಕ್ಸ್‌ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ಸುಮಾರು13 ಪಂದ್ಯಗಳಲ್ಲಿ ಫಾರ್ಮ್‌ ಕಂಡುಕೊಳ್ಳಲು ಪರದಾಡಿದ್ದ ಬಟ್ಲರ್ ಲಯಕ್ಕೆ ಮರಳಿದ್ದು ಮಧ್ಯಮ ಕ್ರಮಾಂಕ ಬಲಿಷ್ಠಗೊಂಡಿದೆ. ಹೋದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ 2–1ರಿಂದ ಸರಣಿ ಜಯಿಸಿದ್ದ ಇಂಗ್ಲೆಂಡ್ ತಂಡವು ಈ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿಕೊಳ್ಳುವ ಗುರಿಯಲ್ಲಿದೆ.

ತಂಡಗಳು: ಇಂಗ್ಲೆಂಡ್: ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ರೋರಿ ಬರ್ನ್ಸ್, ಡಾಮ್ನಿಕ ಸಿಬ್ಲಿ, ಜ್ಯಾಕ್ ಕ್ರಾಲಿ, ಒಲಿ ಪೋಪ್, ಡಾಮ್ನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್‌ ಆ್ಯಂಡರ್ಸನ್, ಕ್ರಿಸ್ ವೋಕ್ಸ್‌, ಮಾರ್ಕ್ ವುಡ್, ಸ್ಯಾಮ್ ಕರನ್.

ಪಾಕಿಸ್ತಾನ: ಅಜರ್ ಅಲಿ (ನಾಯಕ), ಮೊಹ್ಮದ್ ರಿಜ್ವಾನ್ (ವಿಕೆ್‌ಟ್‌ಕೀಪರ್), ಶಾನ್ ಮಸೂದ್, ಅಬಿದ್ ಅಲಿ, ಬಾಬರ್ ಅಜಂ, ಅಸದ್ ಶಫಿಕ್, ಶೋಯಬ್ ಖಾನ್, ಯಾಸಿರ್ ಶಾ, ಮೊಹಮ್ಮದ್ ಅಬ್ಆಸ್, ಶಾಹೀನ್ ಆಫ್ರಿದಿ, ನಸೀಂ ಶಾಹ, ಫವಾದ್ ಅಸ್ಲಂ, ಸೊಹೈಲ್ ಖಾನ್, ಸರ್ಫರಾಜ್ ಅಹಮದ್, ಇಮಾಮ್ ಉಲ್ ಹಕ್, ಖಾಶಿಫ್ ಭಟ್ಟಿ.

ನೇರಪ್ರಸಾರ: ಸೋನಿ ಸಿಕ್ಸ್

ಸಮಯ: ಮಧ್ಯಾಹ್ನ 3.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.