ADVERTISEMENT

ಆ್ಯಷಸ್ ಸರಣಿ ಸೋಲಿಗೆ ದಂಡ: ನಾಯಕತ್ವಕ್ಕೆ ಜೋ ರೂಟ್ ರಾಜೀನಾಮೆ

ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲೆಂಡ್ ಆಟಗಾರ

ಏಜೆನ್ಸೀಸ್
Published 15 ಏಪ್ರಿಲ್ 2022, 13:48 IST
Last Updated 15 ಏಪ್ರಿಲ್ 2022, 13:48 IST
ಜೋ ರೂಟ್‌ –ಎಎಫ್‌ಪಿ ಚಿತ್ರ
ಜೋ ರೂಟ್‌ –ಎಎಫ್‌ಪಿ ಚಿತ್ರ   

ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ರಾಜೀನಾಮೆ ನೀಡಿದ್ದಾರೆ. ಆಸ್ಟ್ರೇಲಿಯಾ ಎದುರಿನ ಆ್ಯಷಸ್ ಸರಣಿಯಲ್ಲಿ ಮತ್ತು ವೆಸ್ಟ್ ಇಂಡೀಸ್ ಎದುರಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನೀರಸ ಪ್ರದರ್ಶನದ ನಂತರ ಅವರ ನಾಯಕತ್ವದ ಮೇಲೆ ಕತ್ತಿ ತೂಗುತ್ತಿತ್ತು.

2017ರಲ್ಲಿ ಅಲೆಸ್ಟರ್ ಕುಕ್ ನಂತರ ನಾಯಕತ್ವವನ್ನು ರೂಟ್‌ ಅವರಿಗೆ ವಹಿಸಲಾಗಿತ್ತು. ನಾಯಕನಾಗಿ ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮತ್ತು ಅತಿ ಹೆಚ್ಚು ಪಂದ್ಯಗಳಲ್ಲಿ ಜಯ ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ. 31 ವರ್ಷದ ರೂಟ್ ನೇತೃತ್ವದಲ್ಲಿ ಇಂಗ್ಲೆಂಡ್ 2018ರಲ್ಲಿ ಭಾರತದ ವಿರುದ್ಧ 4–1ರಲ್ಲಿ ಮತ್ತು ನಂತರದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ 3–1ರಲ್ಲಿ ಜಯ ಗಳಿಸಿತ್ತು.

ಆದರೆ ಈಚಿನ 12 ತಿಂಗಳಲ್ಲಿ ಅವರ ಕ್ರಿಕೆಟ್ ಜೀವನ ಭಾರಿ ತಿರುವು ಕಂಡಿತ್ತು. 2021ರ ಆರಂಭದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡ ನಂತರ 17 ಪಂದ್ಯಗಳ ಪೈಕಿ 11ರಲ್ಲಿ ಸೋತು ಐದನ್ನು ಡ್ರಾ ಮಾಡಿಕೊಂಡಿತ್ತು. ಅವರ ನಾಯಕತ್ವದಲ್ಲಿ ತಂಡ ಆಸ್ಟ್ರೇಲಿಯಾ ಎದುರು ಎರಡು ಬಾರಿ 4–0ಯಿಂದ ಸೋತಿತ್ತು.

ADVERTISEMENT

ಅವರ ಅವಧಿಯಲ್ಲಿ ತಂಡ ಒಟ್ಟು 64 ಪಂದ್ಯಗಳನ್ನು ಆಡಿದ್ದು 27ರಲ್ಲಿ ಜಯ ಗಳಿಸಿತ್ತು. 26 ಪಂದ್ಯಗಳನ್ನು ಸೋತಿತ್ತು. ಅಲೆಸ್ಟರ್ ಕುಕ್ ನಂತರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿರುವ ರೂಟ್ 14 ಶತಕ ಸಿಡಿಸಿದ್ದಾರೆ. ನಾಯಕನಾಗಿ 5,295 ರನ್ ಕಲೆ ಹಾಕಿರುವ ಅವರು ಗರಿಷ್ಠ ರನ್ ಗಳಿಸಿರುವ ಐದನೇ ಆಟಗಾರ ಆಗಿದ್ದಾರೆ. ಗ್ರೇಮ್ ಸ್ಮಿತ್, ಅಲನ್ ಬಾರ್ಡರ್‌, ರಿಕಿ ಪಾಂಟಿಂಗ್ ಮತ್ತು ವಿರಾಟ್ ಕೊಹಿ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.