ADVERTISEMENT

ರಾಯ್ ಕೃಷ್ಣ ಕಾಲ್ಚಳಕ: ಎಟಿಕೆ ಜಯದ ಆರಂಭ

ಗೋವಾದಲ್ಲಿ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:37 IST
Last Updated 20 ನವೆಂಬರ್ 2020, 16:37 IST

ಬ್ಯಾಂಬೊಲಿಮ್ (ಗೋವಾ): ರಾಯ್ ಕೃಷ್ಣ ಅವರ ಕಾಲ್ಚಳಕದ ಮೋಡಿಯಿಂದಾಗಿ ಎಟಿಕೆ ಮೋಹನ್ ಬಾಗನ್ ತಂಡವು ಶುಕ್ರವಾರ ಆರಂಭವಾದ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.

ಕೊರೊನಾ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಕ್ರೀಡಾ ಚಟುವಟಿಕೆಯಾಗಿ ಐಎಸ್‌ಎಲ್ ಆರಂಭವಾಯಿತು.

ಗೋವಾದ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ತುರುಸಿನ ಪೈಪೋಟಿಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡವು 1–0 ಯಿಂದ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಜಯಭೇರಿ ಬಾರಿಸಿತು.

ADVERTISEMENT

ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆಟಗಾರರ ಪೈಪೋಟಿ ಜೋರಾಗಿತ್ತು. ಡಿಜಿಟಲ್ ಫ್ಯಾನ್‌ ವಾಲ್‌ನಲ್ಲಿ ದೇಶ, ವಿದೇಶಗಳ ಅಭಿಮಾನಿಗಳು ಪಂದ್ಯ ವೀಕ್ಷಿಸಿದರು. ಈ ವಾತಾವರಣದಲ್ಲಿಯೂ ಆಟಗಾರರ ಉತ್ಸಾಹಕ್ಕೆ ಕೊರತೆ ಇರಲಿಲ್ಲ.

ಪಂದ್ಯದ 67ನೇ ನಿಮಿಷದವರೆಗೂ ಎರಡೂ ತಂಡಗಳಿಗೆ ಗೋಲು ಒಲಿಯಲಿಲ್ಲ. ಅಷ್ಟರ ಮಟ್ಟಿಗೆ ಉಭಯ ತಂಡಗಳ ರಕ್ಷಣಾ ಪಡೆಯು ಜಿಗುಟುತನದ ಅಟ ತೋರಿದವು. ಆದರೆ, ರಾಯ್ ಕೃಷ್ಣ ಕೊನೆಗೂ ತಮ್ಮ ಚುರುಕುತನಿಂದ ಕೇರಳದ ಗೋಡೆಯನ್ನು ಪುಡಿಗಟ್ಟಿ ಗೋಲಿನ ಕಾಣಿಕೆ ನೀಡಿದರು.

ಕೇರಳದ ಅನುಭವಿ ಗೋಲ್‌ಕೀಪರ್ ಗೋಮ್ಸ್‌ ಅವರನ್ನು ವಂಚಿಸಿದ ಕೃಷ್ಣ ತಮ್ಮ ಮೋಡಿ ತೋರಿಸಿದರು. ಎಟಿಕೆ ತಂಡವು ಎರಡು ಬಾರಿ ಗೋಲ್ ಪೋಸ್ಟ್‌ ಬಳಿ ಸಾಗಿ ವಿಫಲವಾಗಿತ್ತು.

ಆದರೆ, ಪಾಸಿಂಗ್‌ನಲ್ಲಿಅಮೋಘ ಚುರುಕುತನ ಮತ್ತು ಶಿಸ್ತು ತೋರಿದ ಕೇರಳ ತಂಡವು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಪಂದ್ಯದಲ್ಲಿ ಕೇರಳ ತಂಡದ ಫೆಸುಂಡೊ ಪೆರೇರಾ (89ನೇ ನಿಮಿಷ) ಮತ್ತು ಸಹಲ್ ಅಬ್ದುಲ್ ಸಮದ್ (78ನೇ ನಿ) ಒರಟು ಆಟವಾಡಿ ಹಳದಿ ಕಾರ್ಡ್ ದರ್ಶನ ಮಾಡಿದರು.

42ನೇ ನಿಮಿಷದಲ್ಲಿ ಎಟಿಕೆಯ ಎಡು ಗಾರ್ಸಿಯಾ ಅವರಿಗೂ ರೆಫರಿ ಹಳದಿ ಕಾರ್ಡ್‌ ತೋರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.