ADVERTISEMENT

PAK Vs SA | ಡಬ್ಲ್ಯುಟಿಸಿ ಫೈನಲ್‌ನತ್ತ ದಕ್ಷಿಣ ಆಫ್ರಿಕಾ ಚಿತ್ತ

ಪಾಕಿಸ್ತಾನ ವಿರುದ್ಧ ಟೆಸ್ಟ್‌ ಸರಣಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 23:30 IST
Last Updated 25 ಡಿಸೆಂಬರ್ 2024, 23:30 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಸೆಂಚುರಿಯನ್‌, ದಕ್ಷಿಣ ಆಫ್ರಿಕಾ: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಗುರುವಾರ ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿವೆ. 

ADVERTISEMENT

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಸರಣಿಯಲ್ಲಿ ಕನಿಷ್ಠ ಒಂದನ್ನು ಗೆದ್ದು, ಮುಂದಿನ ವರ್ಷ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ಗೆ ನೇರ ಪ್ರವೇಶವನ್ನು ಎದುರು ನೋಡುತ್ತಿದೆ.

ಆಡಿರುವ 10 ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು, 63.33 ಗೆಲುವಿನ ಸರಾಸರಿಯನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಪಡೆಗೆ ಇನ್ನು ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಅದರಲ್ಲಿ ಒಂದು ಗೆದ್ದರೂ ಫೈನಲ್‌ಗೆ ಟಿಕೆಟ್‌ ದೊರೆಯುವುದು ಖಚಿತವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ (58.89) ಮತ್ತು ಭಾರತ (55.89) ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಪಾಕಿಸ್ತಾನ (33.33) ಏಳನೇ ಸ್ಥಾನದಲ್ಲಿದೆ.

ಟೆಸ್ಟ್‌ ಸರಣಿಗೆ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನವು 3–0ಯಿಂದ ದಕ್ಷಿಣ ಆಫ್ರಿಕಾವನ್ನು ಹಣಿದಿತ್ತು.  ಆ ಸೋಲಿನ ಹೊರತಾಗಿಯೂ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿ ದಕ್ಷಿಣ ಆಫ್ರಿಕಾ ಇದೆ.

ಕಳೆದ ಆರು ವರ್ಷಗಳಲ್ಲಿ ಇಲ್ಲಿನ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದಿರುವುದರಿಂದ ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಲ್ವರು ವೇಗಿಗಳಿಗೆ ಮಣೆ ಹಾಕಲಾಗಿದೆ. 140 ಕಿ.ಮೀ. ವೇಗದಲ್ಲಿ ಚೆಂಡು ಎಸೆಯುವ ಕಾರ್ಬಿನ್ ಬಾಷ್ ಅವರು ತವರಿನಲ್ಲಿ ಮೊದಲ ಟೆಸ್ಟ್ ಆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅವರೊಂದಿಗೆ ಅನುಭವಿ ವೇಗಿಗಳಾದ ಕಗಿಸೊ ರಬಾಡ, ಮಾರ್ಕೊ ಯಾನ್ಸನ್‌ ಮತ್ತು ಡೇನ್ ಪೀಟರ್ಸನ್‌ ತಂಡದಲ್ಲಿದ್ದು, ಪಾಕಿಸ್ತಾನದ ಬ್ಯಾಟರ್‌ಗಳಿಗೆ ಸವಾಲು ಹಾಕಲಿದ್ದಾರೆ. ಆದರೆ, ಅನುಭವಿ ಬ್ಯಾಟರ್‌ಗಳು ಸತತ ವೈಫಲ್ಯ ಅನುಭವಿಸುತ್ತಿರುವುದು ಹರಿಣ ಪಡೆಗೆ ತಲೆನೋವಾಗಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಪಾಕಿಸ್ತಾನ ತಂಡದ ಸಾಧನೆಯೂ ಅಷ್ಟೊಂದು ಉತ್ತಮವಾಗಿಲ್ಲ. 1995ರಲ್ಲಿ ಮೊದಲ ಬಾರಿ ಪ್ರವಾಸ ಮಾಡಿದ ಒಟ್ಟು 15 ಟೆಸ್ಟ್ ಪಂದ್ಯಗಳನ್ನು ಆಡಿ, ಕೇವಲ ಎರಡರಲ್ಲಿ ಗೆದ್ದಿದೆ. 12 ಪಂದ್ಯಗಳಲ್ಲಿ ಪರಾಭವಗೊಂಡಿದೆ. 2013ರಲ್ಲಿ ವಾಂಡರರ್ಸ್‌ನಲ್ಲಿ ಪಾಕ್‌ ಗಳಿಸಿದ್ದ 49 ರನ್‌, ಈವರೆಗಿನ ಕನಿಷ್ಠ ಸ್ಕೋರ್‌ ದಾಖಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.