ADVERTISEMENT

ಪನೇಸರ್ ಬೆಸ್ಟ್ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಸಚಿನ್, ದ್ರಾವಿಡ್

ಪಿಟಿಐ
Published 21 ಏಪ್ರಿಲ್ 2020, 20:01 IST
Last Updated 21 ಏಪ್ರಿಲ್ 2020, 20:01 IST
ಮಾಂಟಿ ಪನೇಸರ್
ಮಾಂಟಿ ಪನೇಸರ್   

ನವದೆಹಲಿ (ಪಿಟಿಐ): ಇಂಗ್ಲೆಂಡ್‌ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ತಾವು ಭಾರತದ ಎದುರು ಆಡಿದ ಹನ್ನೊಂದು ಟೆಸ್ಟ್‌ಗಳಲ್ಲಿ ನಾಲ್ಕು ಬಾರಿ ಸಚಿನ್ ತೆಂಡೂಲ್ಕರ್ ವಿಕೆಟ್ ಗಳಿಸಿದ್ದಾರೆ.

ಆದರೂ ಅವರು ತಮ್ಮ ಕಾಲಘಟ್ಟದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಸಚಿನ್ ಎಂದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಅವರನ್ನೂ ಹೆಸರಿಸಿದ್ದಾರೆ.

2006ರಲ್ಲಿ ನಾಗಪುರದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪನೇಸರ್ ಅವರು ಅದೇ ಪಂದ್ಯದಲ್ಲಿ ಸಚಿನ್ ವಿಕೆಟ್ ಗಳಿಸಿದ್ದರು.

ADVERTISEMENT

‘ಸಚಿನ್ ಒಂದು ರೀತಿಯಲ್ಲಿ ನಿರ್ದಯಿ ಬ್ಯಾಟ್ಸ್‌ಮನ್. ಸ್ವಲ್ಲ ಲಯ ಸಿಕ್ಕರೂ ಸಾಕು ದೊಡ್ಡ ಮೊತ್ತ ಪೇರಿಸುವತ್ತ ದಾಪುಗಾಲಿಡುತ್ತಿದ್ದರು. ಆದರೂ ಬೇರೆ ಬ್ಯಾಟ್ಸ್‌ಮನ್‌ಗಳಿಗಿದ್ದ ಕೆಲ ದುರ್ಬಲ ಅಂಶ ಅವರಿಗೂ ಇದ್ದವು. ಆದರೆ ಅವುಗಳನ್ನು ಮೀರಿ ಅವರು ಕಾಲೂರಿ ನಿಂತರೆ ಔಟ್ ಮಾಡುವುದು ಕಷ್ಟವಾಗುತ್ತಿತ್ತು. ಅವರ ಬ್ಯಾಟಿಂಗ್‌ನ ಓಘವೇ ಬೇರೆ ಇರುತ್ತಿತ್ತು’ ಎಂದು ಹೇಳಿದ್ದಾರೆ.

‘ಸಚಿನ್ ಬ್ಯಾಟಿಂಗ್‌ ರೀತಿಯೇ ವಿಶಿಷ್ಟವಾದದ್ದು. ಅವರು ಯಾವ ವೇಗದಲ್ಲಿ ಆಡುತ್ತಾರೆನ್ನುವುದು ಮೊದಲು ತಿಳಿದುಕೊಂಡು ನಿಯಂತ್ರಿಸಲು ಪ್ರಯತ್ನಿಸಬೇಕಿತ್ತು. ಆದರೆ ಅದಕ್ಕಾಗಿ ಬೌಲರ್‌ ಸತತ ಉತ್ತಮ ಎಸೆತಗಳನ್ನು ಪ್ರಯೋಗಿಸುವುದು ಅನಿವಾರ್ಯವಾಗುತ್ತಿತ್ತು’ ಎಂದಿದ್ದಾರೆ

‘ರಾಹುಲ್ ದ್ರಾವಿಡ್ ನಿಜಕ್ಕೂ ಗೋಡೆ. ಅವರ ಅಭಿಮಾನಿಗಳು ಹೇಳುವುದು ಸುಳ್ಳಲ್ಲ. ಅವರ ದೀರ್ಘ ಇನಿಂಗ್ಸ್ ಆಡುವ ಸಾಮರ್ಥ್ಯ ಬೆರಗು ಮೂಡಿಸುವಂತದ್ದು. ಅವರು ಬಳಸುವ ಬ್ಯಾಟ್‌ ಸಹಜ ಅಳತೆಗಿಂತ ಅಗಲವಿದೆಯೇ ಎಂಬ ಸಂಶಯ ಕಾಡುತ್ತಿತ್ತು.ವೀರೇಂದ್ರ ಸೆಹ್ವಾಗ್‌ ಅವರು ಸ್ಫೋಟಕ ಬ್ಯಾಟ್ಸ್‌ಮನ್‌. ಎದುರಾಳಿಗಳ ಸ್ಥೈರ್ಯವನ್ನು ಉಡುಗಿಸಿಬಿಡುತ್ತಿದ್ದ ಪ್ರಚಂಡ’ ಎಂದರು.

ಭಾರತ ತಂಡದಲ್ಲಿ ಸದ್ಯ ‘ರೋಲ್‌ ಮಾಡೆಲ್‌’ಗಳ ಕೊರತೆ ಇದೆ ಎಂದು ಈಚೆಗೆ ಯುವರಾಜ್ ಸಿಂಗ್ ‌ಹೇಳಿಕೆಗೆ ಪ್ರತಿಕ್ರಿಯಿಸಿದ ಪನೇಸರ್, ‘ಸಚಿನ್, ದ್ರಾವಿಡ್ ಮತ್ತು ಲಕ್ಷ್ಮಣ್ ಅವರ ವ್ಯಕ್ತಿತ್ವವೇ ನಮಗೆಲ್ಲ ಒಂದು ಪಾಠ. ಕ್ರೀಡಾಂಗಣದಿಂದ ಹೊರಗಿದ್ದಾಗ ನಮ್ಮ ವರ್ತನೆಗಳು ಹೇಗಿರಬೇಕು ಎಂಬುದಕ್ಕೆ ಅವರ ನಡವಳಿಕೆ ಉತ್ತಮ ಉದಾಹರಣೆ. ಸಚಿನ್ ಅವರನ್ನು ಒಬ್ಬ ಆಟಗಾರನನ್ನಾಗಿ ಮೆಚ್ಚುತ್ತೇನೆ. ಆದರೆ ಆಟದಾಚೆ ಅವರನ್ನು ನೋಡಿದಾಗಲೆಲ್ಲ, ಸಚಿನ್ ಕುಟುಂಬವು ಎಂತಹ ಶ್ರೇಷ್ಠ ಮೌಲ್ಯಗಳನ್ನು ಅವರಿಗೆ ನೀಡಿದೆ ಅನಿಸುತ್ತಿತ್ತು’ ಎಂದಿದ್ದಾರೆ.

‘ಸಂಗಕ್ಕಾರ ಮತ್ತು ಜಯವರ್ಧನೆ ಅವರನ್ನು ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಲ್ಲಿ ಔಟ್ ಮಾಡಲು ನನಗೆ ಸಾಧ್ಯವಾಗಲಿಲ್ಲ. ಅವರ ವಿಕೆಟ್ ಗಳಿಸುವುದು ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್ ಅವರನ್ನು ಔಟ್ ಮಾಡಿದಷ್ಟೇ ಕಠಿಣವಾಗುತ್ತಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.