ADVERTISEMENT

ಮುಂಬೈ ಇಂಡಿಯನ್ಸ್‌ನಲ್ಲಿ ಲಾಭದಾಯಕ ಹುದ್ದೆ ಹೊಂದಿಲ್ಲ

ಹಿತಾಸಕ್ತಿ ಸಂಘರ್ಷ ಆರೋಪ: ಒಂಬುಡ್ಸ್‌ಮನ್‌ಗೆ ಸಚಿನ್‌ ಪತ್ರ

ಪಿಟಿಐ
Published 28 ಏಪ್ರಿಲ್ 2019, 18:30 IST
Last Updated 28 ಏಪ್ರಿಲ್ 2019, 18:30 IST
ಹೋದ ಶುಕ್ರವಾರ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಯುವರಾಜ್‌ ಸಿಂಗ್ (ಎಡ) ಜೊತೆ ಡಗ್‌ಔಟ್‌ನಲ್ಲಿ ಕುಳಿತು ವೀಕ್ಷಿಸಿದ್ದ ಸಚಿನ್‌ ತೆಂಡೂಲ್ಕರ್‌
ಹೋದ ಶುಕ್ರವಾರ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಯುವರಾಜ್‌ ಸಿಂಗ್ (ಎಡ) ಜೊತೆ ಡಗ್‌ಔಟ್‌ನಲ್ಲಿ ಕುಳಿತು ವೀಕ್ಷಿಸಿದ್ದ ಸಚಿನ್‌ ತೆಂಡೂಲ್ಕರ್‌   

ನವದೆಹಲಿ: ‘ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿಲ್ಲ. ತಂಡದ ‘ಐಕಾನ್‌’ ಆಗಿ ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ಸಂಭಾವನೆ ಪಡೆಯುತ್ತಿಲ್ಲ. ಹೀಗಾಗಿ ಹಿತಾಸಕ್ತಿ ಸಂಘರ್ಷ ಉಲ್ಲಂಘನೆಯ ಪ್ರಮೇಯವೇ ಎದುರಾಗುವುದಿಲ್ಲ’ ಎಂದು ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್, ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರಿಗೆ ಬರೆದಿರುವ 14 ಅಂಶಗಳ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಚಿನ್‌ ಪರ ವಕೀಲರು ಭಾನುವಾರ ಜೈನ್‌ ಅವರಿಗೆ ಪತ್ರ ರವಾನಿಸಿದ್ದಾರೆ. ಅಗತ್ಯಬಿದ್ದಲ್ಲಿ ವಕೀಲರ ಜೊತೆ ಖುದ್ದಾಗಿ ಭೇಟಿ ಮಾಡಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದಾಗಿಯೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾಗಿರುವ ಸಚಿನ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರು ಕ್ರಮವಾಗಿ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ (ಎಂಪಿಸಿಎ) ಸದಸ್ಯ ಸಂಜೀವ್‌ ಗುಪ್ತಾ ಅವರು ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಜೈನ್‌ ಅವರು ಸಚಿನ್‌ ಮತ್ತು ಲಕ್ಷ್ಮಣ್‌ಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದರು.

ADVERTISEMENT

‘ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ನಂತರ ಮುಂಬೈ ಇಂಡಿಯನ್ಸ್‌ ತಂಡದ ‘ಐಕಾನ್‌’ ಆಗಿ ಕೆಲಸ ಮಾಡಲು ಒಪ್ಪಿದ್ದೆ. ಇದು ಲಾಭದಾಯಕ ಹುದ್ದೆ ಅಲ್ಲ. ಈ ಕೆಲಸಕ್ಕಾಗಿ ನನಗೆ ಯಾವ ಸಂಭಾವನೆಯೂ ಸಿಗುವುದಿಲ್ಲ. ಫ್ರಾಂಚೈಸ್‌ನಿಂದ ಯಾವ ಸೌಕರ್ಯವನ್ನೂ ಅಪೇಕ್ಷಿಸದೇ ಕೆಲಸ ಮಾಡುತ್ತಿದ್ದೇನೆ’ ಎಂದು ಸಚಿನ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ತಂಡದ ಆಟಗಾರರ ಜೊತೆ ಅನುಭವ ಹಂಚಿಕೊಳ್ಳುವುದು. ಯುವ ಆಟಗಾರರಿಗೆ ಅಗತ್ಯ ಕೌಶಗಳನ್ನು ಹೇಳಿಕೊಡುವುದು. ಆ ಮೂಲಕ ಅವರ ಪ್ರತಿಭೆಗೆ ಸಾಣೆ ಹಿಡಿಯುವುದಷ್ಟೇ ನನ್ನ ಕೆಲಸ. ತಂಡಕ್ಕೆ ಮುಖ್ಯ ಕೋಚ್‌ ಇದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ವಿಭಾಗಗಳಿಗೂ ಪ್ರತ್ಯೇಕ ತರಬೇತುದಾರರಿದ್ದಾರೆ. ತಂಡವನ್ನು ಆಯ್ಕೆ ಮಾಡುವ ಅಥವಾ ಇತರ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನನಗಿಲ್ಲ. ಹೀಗಿರುವಾಗ ಬಿಸಿಸಿಐನ ನಿಯಮಗಳನ್ನು ಉಲ್ಲಂಘಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘2015ರಲ್ಲಿ ಬಿಸಿಸಿಐ ನನ್ನನ್ನು ಸಿಎಸಿ ಸದಸ್ಯನನ್ನಾಗಿ ನೇಮಿಸಿತ್ತು. ಅದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ ತಂಡದ ‘ಐಕಾನ್‌’ ಆಗಿ ಕೆಲಸ ಮಾಡುತ್ತಿದ್ದೆ. ಈ ವಿಷಯ ಬಿಸಿಸಿಐ ಅಧಿಕಾರಿಗಳು ಮತ್ತು ಇತರರಿಗೂ ಗೊತ್ತಿತ್ತು’ ಎಂದಿದ್ದಾರೆ.

‘ಡಗ್‌ಔಟ್‌’ನಲ್ಲಿ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಮಾತ್ರ ಕೂರಲು ಅವಕಾಶ ಇರುತ್ತದೆ. ಇದರಲ್ಲಿ ಸಚಿನ್‌ ಕೂಡಾ ಕುಳಿತಿರುತ್ತಾರೆ. ತಂಡದಲ್ಲಿ ಅವರು ಆಯಾಕಟ್ಟಿನ ಹುದ್ದೆ ಹೊಂದಿದ್ದಾರೆ ಎಂಬುದು ಇದರಿಂದಲೇ ಮನದಟ್ಟಾಗುತ್ತದೆ ಎಂದೂ ಗುಪ್ತಾ ಅವರು ದೂರಿದ್ದರು. ಈ ಬಗ್ಗೆಯೂ ಸಚಿನ್‌ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.