ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಅವರ ಸಂತಸಕ್ಕೆ ಈಗ ಎಲ್ಲೆಯೇ ಇಲ್ಲ.
ಬಾಲ್ಯದಲ್ಲಿ ನಡೆದಿದ್ದ ಅವಘಡವೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಅಮೀರ್ ಕ್ರಿಕೆಟ್ ಆಟಗಾರನಾಗಿ ಬೆಳೆದಿದ್ದು ಸಾಹಸಗಾಥೆ. ತಾವು ಕ್ರಿಕೆಟಿಗರಾಗಲು ಪ್ರೇರಣೆಯಾಗಿದ್ದ ಆ ದಿಗ್ಗಜ ಆಟಗಾರ ತಮ್ಮೆದುರಿಗೆ ಬಂದು ನಿಂತಾಗ ಅಮಿರ್ ಅವರಿಗೆ ಸ್ವರ್ಗ ಮೂರೇ ಗೇಣು. ಹೌದು. ಕಳೆದ ಕೆಲ ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಅಮೀರ್ ಅವರನ್ನು ಭೇಟಿಯಾದರು.
ತಾವು ತಂಗಿದ್ದ ಜಾಗಕ್ಕೆ ಅಮೀರ್ ಅವರನ್ನು ಕರೆಸಿಕೊಂಡು ಅಪ್ಪಿಕೊಂಡು ಅಭಿನಂದಿಸಿದರು. ತಮ್ಮ ಹಸ್ತಾಕ್ಷರ ವಿರುವ ಬ್ಯಾಟ್ ಕಾಣಿಕೆಯಾಗಿ ಕೊಟ್ಟರು. ಆ ಬ್ಯಾಟ್ ಅನ್ನು ತಮ್ಮ ಕಾಲಿನ ಮೂಲಕ ಭುಜ ಮತ್ತು ಕುತ್ತಿಗೆಯ ಮಧ್ಯೆ ಗ್ರಿಪ್ ಮಾಡಿಕೊಂಡ ಅಮೀರ್ ಡ್ರೈವ್ ಮಾಡುವ ಪರಿಯನ್ನು ತೋರಿಸಿದರು. ಅವರೊಂದಿಗೆ ಸಚಿನ್ ಕೂಡ ಡ್ರೈವ್ ಮಾಡುವ ಶೈಲಿಯನ್ನು ತೋರಿಸಿದರು. ಆಮೀರ್ ಅವರ ತನ್ಮಯತೆ ನೋಡಿ ಬೆರಗಾಗಿ, ಭಾವುಕತೆಯಿಂದ ಆಲಂಗಿಸಿಕೊಂಡರು. ಆದರೆ ಅಮೀರ್ ಮಾತ್ರ ಹೆಚ್ಚು ಮಾತನಾಡದೇ ತಮ್ಮ ನೆಚ್ಚಿನ ಆಟಗಾರನ ಸಾಮಿಪ್ಯದ ಸಾರ್ಥಕಭಾವ ಅನುಭವಿಸಿದರು.
ಆಮೀರ್ ಅವರ ಕುಟುಂಬದೊಂದಿಗೆ ಕೆಲಹೊತ್ತು ಕಾಲ ಕಳೆದ ಸಚಿನ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮತ್ತು ಸಂದೇಶ ಹಾಕಿದ್ದಾರೆ.
‘ಅಮೀರ್ ನಿಜವಾದ ಹೀರೊ. ಹೀಗೆ ಎಲ್ಲರಿಗೂ ಪ್ರೇರಣೆ ತುಂಬುತ್ತ ಇರು. ನಿನ್ನನ್ನು ಭೇಟಿಯಾಗಿದ್ದು ಸಂತಸವಾಯಿತು’ ಎಂದು ಸಂದೇಶ ಹಾಕಿದ್ದಾರೆ.
ತಮ್ಮ 14ನೇ ವಯಸ್ಸಿನಲ್ಲಿ ಟಿವಿಯಲ್ಲಿ ಪ್ರಸಾರವಾಗಿದ್ದ ಕ್ರಿಕೆಟ್ ಪಂದ್ಯವೊಂದರಲ್ಲಿ ಸಚಿನ್ ತೆಂಡೂಲ್ಕರ್ ಆಟ ನೋಡಿ ಬ್ಯಾಟ್ ಹಿಡಿದಿದ್ದ ಅಮೀರ್ ಮಾಡಿದ ಸಾಧನೆಗಳು ಹಲವು. ಸದ್ಯ ಅವರಿಗೆ 34 ವರ್ಷ ತುಂಬಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.