ADVERTISEMENT

ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ಅಂಗಲಾಚಿದ್ದೆ: ಸಚಿನ್ ತೆಂಡೂಲ್ಕರ್

ಪಿಟಿಐ
Published 26 ಸೆಪ್ಟೆಂಬರ್ 2019, 12:19 IST
Last Updated 26 ಸೆಪ್ಟೆಂಬರ್ 2019, 12:19 IST
ಸಚಿನ್ ತೆಂಡೂಲ್ಕರ್ –ರಾಯಿಟರ್ಸ್ ಚಿತ್ರ
ಸಚಿನ್ ತೆಂಡೂಲ್ಕರ್ –ರಾಯಿಟರ್ಸ್ ಚಿತ್ರ   

ನವದೆಹಲಿ: ‘ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ನಾನು ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ತಂಡದ ಆಡಳಿತದ ಮುಂದೆ ಅಂಗಲಾಚಿದ್ದೆ. ಆದರೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡೆ. ಹೀಗಾಗಿ ನಂತರ ಎಂದೂ ಆ ಸ್ಥಾನಕ್ಕಾಗಿ ಭಿಕ್ಷೆ ಬೇಡುವ ಅಗತ್ಯ ಬೀಳಲಿಲ್ಲ...’

ಬ್ಯಾಟಿಂಗ್ ಮಾಂತ್ರಿಕ, ಮಾಸ್ಟರ್ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಹೇಳಿರುವ ಮಾತು ಇದು. ‘ಲಿಂಕ್ಡ್ ಇನ್’ ವೆಬ್‌ಸೈಟ್‌ನಲ್ಲಿ ಗುರುವಾರ ವಿಡಿಯೊವನ್ನು ಹಂಚಿಕೊಂಡಿರುವ ಸಚಿನ್ ‘ವೈಫಲ್ಯದ ಆತಂಕದಿಂದ ಅವಕಾಶಗಳನ್ನು ಕೇಳಿ ‍‍ಪಡೆಯಲು ಹಿಂಜರಿಯಬಾರದು’ ಎಂದು ಯುವ ಸಮುದಾಯಕ್ಕೆ ಸಲಹೆ ನೀಡಿದ್ದಾರೆ.

’1994ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗೆ ಇಳಿದಿದ್ದೆ. ಎಲ್ಲ ತಂಡಗಳೂ ವಿಕೆಟ್ ಉಳಿಸಿಕೊಳ್ಳುವ ತಂತ್ರಗಳನ್ನು ಬಳಸುತ್ತಿದ್ದ ಕಾಲವಾಗಿತ್ತು ಅದು. ಹೀಗಾಗಿ ನನ್ನ ಮೇಲೆಯೂ ಒತ್ತಡವಿತ್ತು. ಆದರೂ ಎದೆಗುಂದದೆ ಆಡಿದೆ; ಯಶಸ್ವಿಯಾದೆ’ ಎಂದು ಸಚಿನ್ ಹೇಳಿದ್ದಾರೆ.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಭಾರತಕ್ಕೆ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿರುವ ಸಚಿನ್ ವಿಶ್ವ ದಾಖಲೆಯ 49 ಶತಕಗಳನ್ನು ಸಿಡಿಸಿದ್ದಾರೆ.

‘ಮುಂದೆ ನುಗ್ಗಿ ಎದುರಾಳಿ ಬೌಲರ್‌ಗಳನ್ನು ದಂಡಿಸುವ ಉತ್ಸಾಹ ಇತ್ತು. ಆದರೆ ಆರಂಭಿಕನಾಗಿ ವಿಫಲನಾದರೆ ಮತ್ತೆ ಎಂದೂ ಆ ಸ್ಥಾನಕ್ಕಾಗಿ ಕೋರಿಕೆ ಇಡಬಾರದು ಎಂದು ತಂಡ ಹೇಳಿದ್ದರಿಂದ ತಾಳ್ಮೆ ಕಳೆದುಕೊಳ್ಳದೇ ಆಡಿದೆ. ಪಂದ್ಯದಲ್ಲಿ ನಾನು 49 ಎಸೆತಗಳಲ್ಲಿ 82 ರನ್ ಗಳಿಸಿದೆ. ಆದ್ದರಿಂದ ಮತ್ತೆ ಕೋರಿಕೆ ಇಡುವ ಪ್ರಶ್ನೆಯೇ ಉದ್ಭವವಾಗಲಿಲ್ಲ. ಆಡಳಿತವೇ ನನಗೆ ಆ ಜವಾಬ್ದಾರಿ ನೀಡಲು ಮುಂದೆ ಬಂತು’ ಎಂದು ಸಚಿನ್ ವಿವರಿಸಿದ್ದಾರೆ.

ಆರಂಭಿಕನಾಗಿ ಕ್ರೀಸ್‌ಗೆ ಇಳಿಯಲು ಆರಂಭಿಸಿದ ನಂತರ ಶತಕ ಸಿಡಿಸಲು ಸಚಿನ್ ಆರು ಇನಿಂಗ್ಸ್‌ಗಳ ವರೆಗೆ ಕಾಯಬೇಕಾಯಿತು. ಆಸ್ಟ್ರೇಲಿಯಾ ಎದುರು ಕೊಲಂಬೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಆ ಸಾಧನೆ ಮಾಡಿದ್ದರು. ಮೊದಲ ಐದು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 82, 63, 40, 63 ಮತ್ತು 73 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ 463 ಇನಿಂಗ್ಸ್‌ಗಳಲ್ಲಿ 18,426 ರನ್‌ ಕಲೆ ಹಾಕಿರುವುದು ಕೂಡ ದಾಖಲೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.