ADVERTISEMENT

ಪಂತ್‌ ಬದಲು ಸಹಾಗೆ ಸ್ಥಾನ ನೀಡಿ: ಕಿರ್ಮಾನಿ

ಪಿಟಿಐ
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
ಸೈಯದ್‌ ಕಿರ್ಮಾನಿ
ಸೈಯದ್‌ ಕಿರ್ಮಾನಿ   

ಕೋಲ್ಕತ್ತ: ‘ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್ ಬದಲು ಅನುಭವಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡುವುದು ಸೂಕ್ತ’ ಎಂದು ಭಾರತದ ಹಿರಿಯ ವಿಕೆಟ್‌ ಕೀಪರ್‌ ಸೈಯದ್‌ ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

‘ಗಾಯದ ಕಾರಣ ಸಹಾ ಅವರು ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಪಂತ್‌ ಪ್ರತಿಭಾನ್ವಿತ. ಆತ ಕಲಿಯಬೇಕಿರುವುದು ಸಾಕಷ್ಟಿದೆ’ ಎಂದಿದ್ದಾರೆ.

‘ಕೈಗವಸು ಹಾಕಿ ವಿಕೆಟ್‌ ಹಿಂದೆ ನಿಂತವರೆಲ್ಲಾ ಶ್ರೇಷ್ಠ ವಿಕೆಟ್‌ ಕೀಪರ್‌ಗಳಾಗಲು ಸಾಧ್ಯವಿಲ್ಲ. ಇದು ಅತ್ಯಂತ ಸವಾಲಿನ ಕೆಲಸ. ಯಾರು ಸ್ಥಿರ ಸಾಮರ್ಥ್ಯ ತೋರುತ್ತಾರೋ ಅವರಿಗೆ ತಂಡದಲ್ಲಿ ಅವಕಾಶ ಕೊಡಬೇಕು. ವೃದ್ಧಿಮಾನ್‌ ಅವರು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದೂ ನುಡಿದಿದ್ದಾರೆ.

ADVERTISEMENT

‘ಮಹೇಂದ್ರ ಸಿಂಗ್‌ ಧೋನಿ, ಶ್ರೇಷ್ಠ ನಾಯಕ. ಸಮಯ ಬಂದಾಗ ಅವರೇ ನಿವೃತ್ತಿ ಪ್ರಕಟಿಸುತ್ತಾರೆ. ಆ ಬಗ್ಗೆ ಹೆಚ್ಚು ಚರ್ಚಿಸುವುದು ಸೂಕ್ತವಲ್ಲ. ಸದ್ಯಕ್ಕೆ ಅವರನ್ನು ನಿಶ್ಚಿಂತೆಯಿಂದ ಇರಲು ಬಿಡಿ’ ಎಂದು ತಿಳಿಸಿದ್ದಾರೆ.

ಕೆಲ ಹಿರಿಯ ಕ್ರಿಕೆಟಿಗರು ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ‘ಕಾನೂನಿನ ಮುಂದೆ ಎಲ್ಲರೂ ಒಂದೇ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಅದರಿಂದ ಯಾರಿಗೂ ವಿನಾಯಿತಿ ನೀಡಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.