ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಕರ್ನಾಟಕದ ಕ್ವಾರ್ಟರ್‌ಫೈನಲ್ ಕನಸು ಭಗ್ನ

ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 14:45 IST
Last Updated 3 ಡಿಸೆಂಬರ್ 2024, 14:45 IST
ಶ್ರೇಯಸ್ ಗೋಪಾಲ್ 
ಶ್ರೇಯಸ್ ಗೋಪಾಲ್    

ಇಂದೋರ್: ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಪಾಲಿಗೆ ಮಂಗಳವಾರವು ಸಂತಸದ ದಿನವಾಯಿತು. ಆದರೆ, ಕರ್ನಾಟಕ ತಂಡಕ್ಕೆ ಮಾತ್ರ ಗೆಲುವು ಒಲಿಯಲಿಲ್ಲ. 

ಎಮೆರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬರೋಡಾ ತಂಡವು ಕರ್ನಾಟಕದ ಎದುರು 4 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಮಯಂಕ್ ಅಗರವಾಲ್ ಬಳಗದ ಕನಸು ಕಮರಿತು. 

ಬಿ ಗುಂಪಿನಲ್ಲಿ ಕರ್ನಾಟಕ ತಂಡವು ಆಡಿರುವ 6 ಪಂದ್ಯಗಳಲ್ಲಿ 3 ಗೆದ್ದು, 3ರಲ್ಲಿ ಸೋತಿದೆ. 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸೌರಾಷ್ಟ್ರ, ಗುಜರಾತ್ ಮತ್ತು ಬರೋಡಾ ತಂಡಗಳು ತಲಾ 20 ಅಂಕ ಗಳಿಸಿವೆ. ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಎಲ್ಲ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿಯಿದೆ. ಕರ್ನಾಟಕವು ಗುಜರಾತ್ ತಂಡವನ್ನು ಡಿ 5ರಂದು ಎದುರಿಸಲಿದೆ. 

ADVERTISEMENT

ಕರ್ನಾಟಕ ತಂಡವು ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಇನಿಂಗ್ಸ್‌  ಆರಂಭಿಸಿದ ಮನೀಷ್ ಪಾಂಡೆ (10; 6ಎ, 6X1) ಮತ್ತು ಮಯಂಕ್ ಅಗರವಾಲ್ (1; 3ಎ) ಬೇಗನೇ ಔಟಾದರು. ಅಭಿನವ್ ಮನೋಹರ್ (56; 34ಎ, 6X6)  ಶ್ರೀಜಿತ್ (22; 9ಎ, 6X3) ಹಾಗೂ ಸ್ಮರಣ್ (38ರನ್)  ಅವರ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 169 ರನ್ ಗಳಿಸಿತು. 

ಅದಕ್ಕುತ್ತರವಾಗಿ ಬರೋಡಾ ತಂಡವು 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 172 ರನ್ ಗಳಿಸಿ ಜಯಿಸಿತು. ಕರ್ನಾಟಕದ ಮಟ್ಟಿಗೆ ಶ್ರೇಯಸ್ ಗೋಪಾಲ್ ಅವರ ಹ್ಯಾಟ್ರಿಕ್ ಒಂದೇ ಸಂತಸ ತಂದ ಸಂಗತಿ. 

ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಬರೋಡಾ ತಂಡದ ಶಾಶ್ವತ್ ರಾವತ್ (63; 37ಎ, 4X7, 6X2), ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಅವರ ವಿಕೆಟ್‌ಗಳನ್ನು ಸತತ ಮೂರು ಎಸೆತಗಳಲ್ಲಿ ಉರುಳಿಸಿದರು. ಈ ಹಂತದಲ್ಲಿ ಬರೋಡಾ ತಂಡದ ಮೊತ್ತವು 4 ವಿಕೆಟ್‌ಗಳಿಗೆ 102 ರನ್‌ಗಳಾಗಿತ್ತು. ಇದು ಕರ್ನಾಟಕದಲ್ಲಿ ಗೆಲುವಿನ ಆಸೆ ಮೂಡಿಸಿತ್ತು. 

ಆದರೆ, ಕೊನೆಯ ಹಂತದಲ್ಲಿ ವಿಷ್ಣು ಸೋಳಂಕಿ (ಔಟಾಗದೆ 28) ಹಾಗೂ ಶಿವಾಲಿಕ್ ಶರ್ಮಾ (22; 21ಎ) ಅವರಿಬ್ಬರೂ ಕರ್ನಾಟಕ ಬೌಲರ್‌ಗಳನ್ನು ದಂಡಿಸಿದರು. ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.  

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 169 (ಕೆ.ಎಲ್. ಶ್ರೀಜಿತ್ 22, ಸ್ಮರಣ್ ರವಿಚಂದ್ರನ್ 38, ಅಭಿನವ್ ಮನೋಹರ್ ಔಟಾಗದೆ 56, ಕೃಣಾಲ್ ಪಾಂಡ್ಯ 19ಕ್ಕೆ2, ಅತೀಥ್ ಶೇಟ್ 45ಕ್ಕೆ2) ಬರೋಡಾ: 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 172 (ಶಾಶ್ವತ್ ರಾವತ್ 63, ಭಾನು ಪನಿಯಾ 42, ಶಿವಾಲಿಕ್ ಶರ್ಮಾ 22, ವಿಷ್ಣು ಸೋಳಂಕಿ ಔಟಾಗದೆ 28, ಶ್ರೇಯಸ್ ಗೋಪಾಲ್ 19ಕ್ಕೆ4) ಫಲಿತಾಂಶ: ಬರೋಡಾ ತಂಡಕ್ಕೆ 4 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.