ADVERTISEMENT

ಸ್ಥಾನಕ್ಕಾಗಿ ಹಿರಿಯ ಕ್ರಿಕೆಟಿಗರ ‘ಶತಪ್ರಯತ್ನ’

ನೂತನ ಆಯ್ಕೆ ಸಮಿತಿಗಳ ಆಯ್ಕೆಗೆ ಕೆಎಸ್‌ಸಿಎ ಸಿದ್ಧತೆ; ಇನ್ನೆರಡು ದಿನಗಳಲ್ಲಿ ಪಟ್ಟಿ ಪ್ರಕಟ ಸಾಧ್ಯತೆ?

ಗಿರೀಶದೊಡ್ಡಮನಿ
Published 18 ಮಾರ್ಚ್ 2020, 20:30 IST
Last Updated 18 ಮಾರ್ಚ್ 2020, 20:30 IST
ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ರಘುರಾಮ್ ಭಟ್ ಮತ್ತು ಆಟಗಾರ ಜೆ. ಸುಚಿತ್ –ಪ್ರಜಾವಾಣಿ ಸಂಗ್ರಹ
ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ರಘುರಾಮ್ ಭಟ್ ಮತ್ತು ಆಟಗಾರ ಜೆ. ಸುಚಿತ್ –ಪ್ರಜಾವಾಣಿ ಸಂಗ್ರಹ   

ಬೆಂಗಳೂರು: ಕರ್ನಾಟಕ ಸೀನಿಯರ್ ಕ್ರಿಕೆಟ್ ತಂಡ ಸೇರಿದಂತೆ ಎಲ್ಲ ವಯೋಮಿತಿಯ ತಂಡಗಳ ಆಯ್ಕೆ ಸಮಿತಿಗಳನ್ನು ಹೊಸದಾಗಿ ರಚಿಸುವ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆರಂಭಿಸಿದೆ.

ಹೋದ ಮೂರು ವರ್ಷಗಳಿಂದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸುತ್ತಿರುವ ಕರ್ನಾಟಕ ತಂಡದ ಆಯ್ಕೆ ಸಮಿತಿಯಲ್ಲಿ ‘ಪ್ರಮುಖ ಬದಲಾವಣೆ’ ಗಳು ಆಗುವ ಸಾಧ್ಯತೆಗಳೂ ಹೆಚ್ಚಿವೆ. ಬೇರೆ ಬೇರೆ ವಯೋಮಿತಿಯ ತಂಡಗಳ ಆಯ್ಕೆ ಸಮಿತಿಗಳ ಮುಖ್ಯಸ್ಥರ ಸ್ಥಾನಕ್ಕಾಗಿ ಮತ್ತು ಸದಸ್ಯರಾಗಿ ನೇಮಕರಾಗಲು ಕೆಲವು ಹಿರಿಯ ಕ್ರಿಕೆಟಿಗರೂ ‘ಪ್ರಯತ್ನ’ ನಡೆಸಿದ್ದಾರೆಂದೂ ಮೂಲಗಳು ತಿಳಿಸಿವೆ. ಆದರೆ, ಆ ಆಟಗಾರರು ಯಾರು ಎಂದು ಹೆಸರು ಬಹಿರಂಗಪಡಿಸಿಲ್ಲ.

ಈ ಉಪಸಮಿತಿಗಳ ನೇಮಕಕ್ಕೆ ಕೆಎಸ್‌ಸಿಎ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ. ಅಭಿರಾಮ್, ಕಾರ್ಯದರ್ಶಿ ಸುರೇಶ್ ಮೆನನ್, ಖಜಾಂಚಿ ವಿನಯ್ ಮೃತ್ಯುಂಜಯ ಮತ್ತು ಸಹಕಾರ್ಯದರ್ಶಿ ಶಾವೀರ್ ತಾರಾಪುರೆ ಅವರು ಅದರಲ್ಲಿದ್ದಾರೆ. ಈ ಕಮಿಟಿಯು ಆಯ್ಕೆ ಸಮಿತಿಗಳು ಮತ್ತು ವಿವಿಧ ಉಪಸಮಿತಿಗಳ ಮುಖ್ಯಸ್ಥರ ಹಾಗೂ ಸದಸ್ಯರ ನೇಮಕ ಮಾಡಲಿದೆ.

ADVERTISEMENT

‘ಪ್ರಕ್ರಿಯೆ ಆರಂಭವಾಗಿದೆ. ಎಲ್ಲರನ್ನೂ ಬದಲಾವಣೆ ಮಾಡುವುದಿಲ್ಲ. ಕೆಲವು ಸಮಿತಿಗಳಿಗೆ ಅದೇ ಸದಸ್ಯರು ಮುಂದುವರಿಯಬಹುದು. ಇನ್ನು ಕೆಲವು ಸಮಿತಿಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳು ಆಗಬಹುದು. ಎಲ್ಲ ಉಪಸಮಿತಿಗಳನ್ನು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ. ಇಲ್ಲಿಯವರೆಗೆ ಈ ಸಮಿತಿಗಳಲ್ಲಿರುವವರು ಮಾಡಿರುವ ಕಾರ್ಯಗಳ ಮೌಲ್ಯಮಾಪನ ಮಾಡಲಾಗುತ್ತಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಮತ್ತೊಂದು ಅವಕಾಶ ಸಿಗಬಹುದು. ಇನ್ನು ಎರಡು–ಮೂರು ದಿನಗಳಲ್ಲಿ ಅಂತಿಮ ಪಟ್ಟಿಗಳನ್ನು ಪ್ರಕಟಿಸಲಾಗುವುದು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕರ್ನಾಟಕ ತಂಡದ ಆಯ್ಕೆ ಸಮಿತಿಗೆ ಹೋದ ಮೂರು ವರ್ಷಗಳಿಂದ ರಘುರಾಮ್ ಭಟ್ ಅವರು ಮುಖ್ಯಸ್ಥರಾಗಿದ್ದಾರೆ. ಇದರಲ್ಲಿ ದೊಡ್ಡಗಣೇಶ್ ಮತ್ತು ಫಜಲ್ ಖಲೀಲ್ ಸದಸ್ಯರಾಗಿದ್ದರು. ಹೋದ ವರ್ಷ ದೊಡ್ಡಗಣೇಶ್ ಅವರು ಗೋವಾ ತಂಡದ ಕೋಚ್ ಆಗಿ ನೇಮಕವಾಗಿದ್ದರು. ಆದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಆನಂದ್ ಕಟ್ಟಿಯವರನ್ನು ನೇಮಕ ಮಾಡಲಾಗಿತ್ತು.

ರಣಜಿ ತಂಡವು ಹೋದ ಮೂರು ಋತುಗಳಿಂದ ಸೆಮಿಫೈನಲ್‌ನಲ್ಲಿ ಮುಗ್ಗರಿಸುತ್ತಿದೆ. ಈಚೆಗೆ ಕೋಲ್ಕತ್ತದಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಅವರು ತೀವ್ರ ಟೀಕೆಗೆ ಒಳಗಾಗಿದ್ದರು. ಕರುಣ್ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಅವರನ್ನು ತಂಡದಲ್ಲಿ ಮುಂದುವರಿಸಿದ್ದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬೌಲಿಂಗ್ ವಿಭಾಗವು ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಬ್ಯಾಟಿಂಗ್ ವಿಭಾಗ ಅಸ್ಥಿರವಾಗಿತ್ತು. ಇದರಿಂದಾಗಿ ಆಯ್ಕೆ ಸಮಿತಿಯಲ್ಲಿ ಕೆಲವು ಬದಲಾವಣೆಗೆ ಒತ್ತು ಕೊಡಬಹುದು ಎಂದು ಸಂಸ್ಥೆಯ ಕೆಲವು ಸದಸ್ಯರು ಹೇಳುತ್ತಾರೆ.

ರಣಜಿ ಟ್ರೋಫಿಗಿಂತ ಮುಂದೆ ದುಲೀಪ್ ಟ್ರೋಫಿಯಲ್ಲಿ ಕರುಣ್ ಉತ್ತಮ ಆಟವಾಡಿದ್ದು ಅವರಿಗೆ ಶ್ರೀರಕ್ಷೆಯಾಗಿತ್ತು ಎಂದೂ ಹೇಳಲಾಗುತ್ತದೆ. ಆದರೆ, ತಂಡವು ಈ ಅವಧಿಯಲ್ಲಿ ಎರಡು ಬಾರಿ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನೂ ಗೆದ್ದಿತ್ತು. ಆದ್ದರಿಂದ ಈ ಅಂಶವು ಸಮಿತಿಗೆ ಅನುಕೂರವಾಗಬಹುದು ಎಂದೂ ಹೇಳಲಾಗುತ್ತಿದೆ.

ಕಳೆದ ಮುರ್ನಾಲ್ಕು ವರ್ಷಗಳಲ್ಲಿ ಕರ್ನಾಟಕ ತಂಡದ ನಿರ್ಗಮಿಸಿರುವ ಕೆಲವು ಆಟಗಾರರು ಕೋಚ್ ಆಗಿಅಥವಾ ಆಯ್ಕೆ ಸಮಿತಿಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಅಲ್ಲದೇ ಕರ್ನಾಟಕ ಕ್ರಿಕೆಟ್ ಅಕಾಡೆಮಿಯಲ್ಲಿ ತೆರವಾಗಿರುವ ಕೋಚ್ ಸ್ಥಾನಗಳಿಗೂ ಇದೇ ಸಂದರ್ಭದಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

‘ಉಪಸಮಿತಿಗಳ ಮುಖ್ಯಸ್ಥರು ಮತ್ತು ಸದಸ್ಯರ ನೇಮಕವನ್ನು ಅಂತಿಮಗೊಳಿಸಿ ಆಡಳಿತ ಸಮಿತಿಯ ಮುಂದೆ ಇಡುತ್ತೇವೆ. ಸಮಿತಿಯ ಅನುಮೋದನೆ ದೊರೆತ ನಂತರ ಪ್ರಕಟಿಸುತ್ತೇವೆ’ ಎಂದು ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.