ADVERTISEMENT

ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ: ಚೆಂಡಿನಲ್ಲೂ ಮಿಂಚಿದ ಶಫಾಲಿ ಹ್ಯಾಟ್ರಿಕ್‌

ಪಿಟಿಐ
Published 18 ಮಾರ್ಚ್ 2025, 16:21 IST
Last Updated 18 ಮಾರ್ಚ್ 2025, 16:21 IST
ಶಫಾಲಿ ವರ್ಮಾ –ಎಕ್ಸ್‌ ಚಿತ್ರ
ಶಫಾಲಿ ವರ್ಮಾ –ಎಕ್ಸ್‌ ಚಿತ್ರ   

ಗುವಾಹಟಿ: ಹರಿಯಾಣ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತದ ಬ್ಯಾಟರ್‌ ಶಫಾಲಿ ವರ್ಮಾ ಅವರು 23 ವರ್ಷದೊಳಗಿನವರ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡದ ವಿರುದ್ಧ ಹ್ಯಾಟ್ರಿಕ್‌ ವಿಕೆಟ್‌ನೊಂದಿಗೆ ಮಿಂಚಿದರು.

ಉತ್ತರ ಗುವಾಹಟಿಯ ಎಸಿಎ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರಿಯಣ ತಂಡವು ಆರು ವಿಕೆಟ್‌ಗಳಿಂದ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಯಿತು.

ಸಾಂದರ್ಭಿಕ ಆಫ್‌ ಸ್ಪಿನ್‌ ಬೌಲರ್‌ ಆಗಿರುವ 21 ವರ್ಷ ವಯಸ್ಸಿನ ಶಫಾಲಿ 44ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಲೋನಿ ಪಿ. ಮತ್ತು ಸೌಮ್ಯಾ ವರ್ಮಾ ಅವರ ವಿಕೆಟ್‌ ಪಡೆದರು. 46ನೇ ಓವರ್‌ನ ಮೊದಲ ಎಸೆತದಲ್ಲಿ ನಮಿತಾ ಡಿಸೋಜ ಅವರ ವಿಕೆಟ್‌ ಗಳಿಸಿ ಹ್ಯಾಟ್ರಿಕ್‌ ಪೂರೈಸಿದರು. 

ADVERTISEMENT

ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾದ ಶಫಾಲಿ ಅವರನ್ನು ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡದಿಂದ ಕೈಬಿಡಲಾಗಿತ್ತು. ಅವರು ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ, ರಾಷ್ಟ್ರೀಯ ತಂಡಕ್ಕೆ ಮರಳುವ ಛಲದಲ್ಲಿದ್ದಾರೆ.

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಡಬ್ಲ್ಯುಪಿಎಲ್‌ನ ಮೂರನೇ ಆವೃತ್ತಿಯಲ್ಲಿ 9 ಪಂದ್ಯಗಳಿಂದ 304 ರನ್‌ ಗಳಿಸಿರುವ ಅವರು, ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕಕ್ಕೆ ನಿರಾಸೆ: ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು ಮಿಥಿಲಾ ವಿನೋದ್‌ (90;87ಎ, 4x16) ಅವರ ಬ್ಯಾಟಿಂಗ್‌ ಬಲದಿಂದ 49.3 ಓವರ್‌ಗಳಲ್ಲಿ 217 ರನ್‌ ಗಳಿಸಿತು. ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಫಾಲಿ ಮೂರು ವಿಕೆಟ್‌ ಪಡೆದರೆ, ಅಮನ್‌ದೀಪ್‌ ಕೌರ್‌ ಮತ್ತು ತ್ರಿವೇಣಿ ವಶಿಷ್ಠ ತಲಾ ಎರಡು ವಿಕೆಟ್‌ ಪಡೆದರು.

ಗುರಿಯನ್ನು ಬೆನ್ನಟ್ಟಿದ ಹರಿಯಾಣ ತಂಡವು 42 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 219 ರನ್‌ ಗಳಿಸಿ ಜಯ ಸಾಧಿಸಿತು. ಬ್ಯಾಟಿಂಗ್‌ನಲ್ಲಿ ಶಫಾಲಿ (18) ನಿರಾಸೆ ಮೂಡಿಸಿದರು. ಆದರೆ, ಸೋನಿಯಾ ಮೆಂಧಿಯಾ (66;79ಎ, 4x8) ಮತ್ತು ತನಿಷಾ ಓಹ್ಲಾನ್ (ಔಟಾಗದೇ 77;77ಎ, 4x10, 6x1) ತಾಳ್ಮೆಯ ಆಟವಾಡಿ ಗೆಲುವಿನ ರೂವಾರಿಗಳಾದರು.

ಸಂಕ್ಷಿಪ್ತ ಸ್ಕೋರ್‌:

ಕರ್ನಾಟಕ: 49.3 ಓವರ್‌ಗಳಲ್ಲಿ 217 (ಮಿಥಿಲಾ ವಿನೋದ್‌ 90, ಸಲೋನಿ 30; ಅಮನ್‌ದೀಪ್‌ ಕೌರ್‌ 32ಕ್ಕೆ 2, ತ್ರಿವೇಣಿ ವಶಿಷ್ಠ 38ಕ್ಕೆ 2, ಶಫಾಲಿ ವರ್ಮಾ 20ಕ್ಕೆ 3). ಹರಿಯಾಣ: 42 ಓವರ್‌ಗಳಲ್ಲಿ 4ಕ್ಕೆ 219 (ಸೋನಿಯಾ ಮೆಂಧಿಯಾ 66, ತನಿಷಾ ಓಹ್ಲಾನ್ ಔಟಾಗದೇ 77; ನಮಿತಾ ಡಿಸೋಜ 43ಕ್ಕೆ 2, ಸಲೋನಿ ಪಿ. 49ಕ್ಕೆ 2). ಫಲಿತಾಂಶ: ಹರಿಯಾಣಕ್ಕೆ ಆರು ವಿಕೆಟ್‌ ಜಯ. ಪಂದ್ಯದ ಆಟಗಾರ್ತಿ: ತನಿಷಾ ಓಹ್ಲಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.