ನವದೆಹಲಿ: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಜ್ಜಾಗಿದ್ದಾರೆ.
ಬಂಗಾಳದ ಬೌಲರ್‌ಗೆ ಎನ್‌ಸಿಎ ವೈದ್ಯಕೀಯ ತಂಡದಿಂದ ಅನುಮತಿ ಸಿಗಬೇಕಾಗಿದ್ದು, ಅದು ಔಪಚಾರದ ಕ್ರಮವೆನಿಸಿದೆ. ಮೆಲ್ಬರ್ನ್‌ನಲ್ಲಿ ಡಿಸೆಂಬರ್ 26ರಿಂದ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ (ನಾಲ್ಕನೇ ಟೆಸ್ಟ್) ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಐದು ಟೆಸ್ಟ್‌ಗಳ ಸರಣಿಯ ನಾಲ್ಕನೇ ಪಂದ್ಯ. ಮೂರನೇ ಟೆಸ್ಟ್ ಬ್ರಿಸ್ಬೇನ್‌ನಲ್ಲಿ ಡಿಸೆಂಬರ್ 14ರಂದು ಆರಂಭವಾಗುತ್ತದೆ.
ಎನ್‌ಸಿಎದಿಂದ ಫಿಟ್ನೆಸ್ ಪ್ರಮಾಣಪತ್ರ ಶೀಘ್ರ ದೊರಕಲಿದೆ ಎಂದು ಶಮಿ ಅವರ ಆಪ್ತ ಮೂಲ ಪಿಟಿಐಗೆ ತಿಳಿಸಿದೆ.
‘ಶಮಿ ಅವರ ಕಿಟ್‌ಅನ್ನು ಈಗಾಗಲೇ ಆಸ್ಟ್ರೇಲಿಯಾಕ್ಕೆ ರವಾನಿಸಲಾಗಿದೆ. ಅವರು ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಆಡಲಿದ್ದು, ಬಳಿಕ ಆಸ್ಟ್ರೇಲಿಯಾಕ್ಕೆ ತೆರಳುವರು’ ಎಂದು ಈ ಮೂಲ ತಿಳಿಸಿದೆ.
2023ರ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ವೇಳೆ ಪಾದದ ನೋವಿಗೆ ಒಳಗಾಗಿದ್ದ, 34 ವರ್ಷ ವಯಸ್ಸಿನ ಬೌಲರ್ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕ್ರಿಕೆಟ್‌ನಿಂದ ದೂರವಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ನಾಕೌಟ್ ಸುತ್ತು ಬೆಂಗಳೂರಿನಲ್ಲಿ ನಡೆಯಲಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ವೈದ್ಯಕೀಯ ತಂಡದ ಮುಖ್ಯಸ್ಥ ಡಾ.ನಿತಿನ್ ಪಟೇಲ್ ನೇತೃತ್ವದ ತಂಡ ಮತ್ತು ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಟ್ರೇನರ್ ನಿಶಾಂತ್ ಬೊರ್ಡೊಲೊಯಿ ಅವರ ಫಿಟ್ನೆಸ್ ಮೌಲ್ಯಮಾಪನ ನಡೆಸುವ ನಿರೀಕ್ಷೆಯಿದೆ.
‘ಶಮಿ, ಚಂಡೀಗಢ ವಿರುದ್ಧ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ನಮ್ಮ ತಂಡವನ್ನು ಭಾನುವಾರ ಬೆಂಗಳೂರಿನಲ್ಲಿ ಸೇರಿಕೊಳ್ಳಲಿದ್ದಾರೆ. ಆದರೆ ತಂಡ ಎಂಟರ ಘಟ್ಟ ಮತ್ತು ನಂತರ ಹಂತಗಳಿಗೆ ತೇರ್ಗಡೆಗೊಂಡರೆ ಅವರು ಆಡುವರೇ ಎಂಬ ಬಗ್ಗೆ ತಮಗೆ ಖಚಿತವಿಲ್ಲ’ ಎಂದು ಬಂಗಾಳ ತಂಡದ ಕೋಚ್ ಲಕ್ಷ್ಮಿ ರತನ್ ಶುಕ್ಲಾ ತಿಳಿಸಿದರು.
ಜಸ್‌ಪ್ರೀತ್ ಬೂಮ್ರಾ ಮೇಲಿನ ಒತ್ತಡವನ್ನು ತಗ್ಗಿಸಲು ಭಾರತಕ್ಕೆ ಶಮಿ ಅವರ ಅಗತ್ಯವಿದೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದರು. ಇದೇ ಮಾತನ್ನು ಶುಕ್ಲಾ ಕೂಡ ಧ್ವನಿಸಿದ್ದಾರೆ.
ಶಮಿ ಆರು ಕೆ.ಜಿ.ಯಷ್ಟು ತೂಕ ಕಳೆದುಕೊಂಡಿದ್ದಾರೆ. ಅವರು 13 ದಿನಗಳಲ್ಲಿ ಏಳು ಟಿ20 ಪಂದ್ಯಗಳನ್ನು ಆಡಲಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.