ಮುಂಬೈ: ಟೆಸ್ಟ್ ತಂಡ ಮತ್ತು ಏಷ್ಯಾ ಕಪ್ ಟಿ20 ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಅವರನ್ನು ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಎರಡು ‘ಟೆಸ್ಟ್’ ಪಂದ್ಯಗಳನ್ನು ಆಡಲಿರುವ ಭಾರತ ‘ಎ’ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 15 ಸದಸ್ಯರ ತಂಡದಲ್ಲಿ ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಪ್ರಸಿದ್ಧ ಕೃಷ್ಣ ಅವರು ಸ್ಥಾನ ಪಡೆದಿದ್ದಾರೆ.
ಲಖನೌದ ಏಕನಾ ಕ್ರೀಡಾಂಗಣದಲ್ಲಿ ಸೆ. 16 ರಿಂದ 19 ರವರೆಗೆ ಮತ್ತು 22 ರಿಂದ 26ರವರೆಗೆ ಈ ಪಂದ್ಯಗಳು ನಡೆಯಲಿವೆ.
ಸೀನಿಯರ್ ತಂಡದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರು ಎರಡನೇ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ಮೊಣಕಾಲು ನೋವಿನಿಂದ ಚೇತರಿಸಿಕೊಂಡಿರುವ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಮರಳಿದ್ದಾರೆ. ಆದರೆ ಗಾಯಾಳಾಗಿರುವ ಕರುಣ್ ನಾಯರ್ ಅವಕಾಶ ಪಡೆದಿಲ್ಲ.
ಏಷ್ಯಾ ಕಪ್ ತಂಡದಲ್ಲಿ ಅವಕಾಶವಂಚಿತರಾದ ಶ್ರೇಯಸ್, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಭಾರತ ತಂಡದ ಬ್ಯಾಟರ್–ಕೀಪರ್ ಧ್ರುವ್ ಜುರೇಲ್ ಉಪನಾಯಕರಾಗಿದ್ದಾರೆ.
ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಟೆಸ್ಟ್ ಆಟಗಾರರಾದ ಸ್ಯಾಮ್ ಕೊನ್ಸ್ಟಾಸ್, ನೇಥನ್ ಮೆಕ್‌ಸ್ವೀನಿ, ಕೂಪರ್ ಕಾನೊಲಿ ಮತ್ತು ಟಾಡ್ ಮರ್ಫಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.