ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಪರಿಗಣಿಸದಂತೆ ಕೋರಿದ ಶ್ರೇಯಸ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 0:12 IST
Last Updated 24 ಸೆಪ್ಟೆಂಬರ್ 2025, 0:12 IST
ಶ್ರೇಯಸ್ ಅಯ್ಯರ್‌
ಶ್ರೇಯಸ್ ಅಯ್ಯರ್‌   

ನವದೆಹಲಿ: ಭಾರತ ಎ ತಂಡದ ನಾಯಕತ್ವದಿಂದ ಹಿಂದೆಸರಿದಿರುವ ಮಧ್ಯಮ ಕ್ರಮಾಂಕದ ಬ್ಯಾಟರ್‌ ‌ಶ್ರೇಯಸ್‌ ಅಯ್ಯರ್ ಅವರು ಮುಂಬರುವ ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.

‘ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ಟೆಸ್ಟ್ ಮಾದರಿಯಲ್ಲಿ ಆಡುವುದು ಕಷ್ಟ. ತಮ್ಮನ್ನು ತವರಿನಲ್ಲಿ ನಡೆಯುವ ವಿಂಡೀಸ್‌ ವಿರುದ್ಧದ ಸರಣಿಗೆ ಪರಿಗಣಿಸಬೇಡಿ’ ಎಂದು 30 ವರ್ಷದ ಶ್ರೇಯಸ್‌ ಅವರು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್‌ ಲಿಖಿತವಾಗಿ ಕೇಳಿಕೊಂಡಿದ್ದಾರೆ. 

ಲಖನೌನಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆಯುತ್ತಿರುವ ಭಾರತ ಎ ತಂಡದ ಎರಡನೇ ‘ಟೆಸ್ಟ್’ ಪಂದ್ಯದಿಂದ ಶ್ರೇಯಸ್ ಹಿಂದೆ ಸರಿದಿದ್ದರು. ಈಗ ಅವರು ದೀರ್ಘ ಮಾದರಿಯ ಕ್ರಿಕೆಟ್‌ನಿಂದಲೂ ತಾತ್ಕಾಲಿಕ ವಿರಾಮ ಬಯಸಿದ್ದಾರೆ. ಶ್ರೇಯಸ್‌ ಅನುಪಸ್ಥಿತಿಯಲ್ಲಿ ಧ್ರುವ್‌ ಜುರೇಲ್‌ ಅವರು ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ADVERTISEMENT

‘ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ಹೋಗಿರುವುದಾಗಿ ಶ್ರೇಯಸ್‌ ಅವರು ಭಾರತ ಎ ತಂಡದ ಆಡಳಿತ ಮಂಡಳಿಗೆ ತಿಳಿಸಿದ್ದರೂ, ಸದ್ಯಕ್ಕೆ ಪ್ರಥಮ ದರ್ಜೆ ಮತ್ತು ಟೆಸ್ಟ್ ಕ್ರಿಕೆಟ್‌ ಆಡಲು ಸಾಧ್ಯವಿಲ್ಲ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರಿಗೆ ತಿಳಿಸಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

2025ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದ ಶ್ರೇಯಸ್ ಅವರು ಅಕ್ಟೋಬರ್ 15ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿ ಋತುವಿಗೆ ಆಡುವುದೂ ಅನುಮಾನವಾಗಿದೆ.

ಶ್ರೇಯಸ್ ಅವರು ಬೆನ್ನುನೋನಿಂದ ಚೇತರಿಸಿಕೊಳ್ಳಲು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹೋಗುವ ಸಾಧ್ಯತೆಯಿದೆ. ಅವರು ಕಳೆದ ದೇಶೀಯ ಋತುವಿನಲ್ಲಿ ಕ್ರಿಕೆಟ್‌ ಆಡುವ ವೇಳೆಯೂ ಬೆನ್ನುನೋವು ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.