ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿ
– ಪಿಟಿಐ ಚಿತ್ರ
ನವದೆಹಲಿ: ಭಾರತ ತಂಡದ ಯುವ ನಾಯಕ ಶುಭಮನ್ ಗಿಲ್ ದೃಢನಿಶ್ಚಯದ ವ್ಯಕ್ತಿಯಾಗಿರುವುದರಿಂದ ನಾಯಕತ್ವ ನಿಭಾಯಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ಪಾರ್ಥಿವ್ ಪಟೇಲ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಹಾಗಾಗಿ ಗಿಲ್ ಅವರ ಸ್ವಭಾವವನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.
ಪಿಟಿಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಗಿಲ್ ಅವರು ಗೌತಮ್ ಗಂಭೀರ್ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದಾರೆ. ನಾನು ಗಿಲ್‌ರನ್ನು ನೋಡಿದಂತೆ ಅವರು ಎಲ್ಲಾ ರೀತಿಯ ಸನ್ನಿವೇಶಗಳಿಗೂ ಸಾಕಷ್ಟು ತಯಾರಿ ನಡೆಸಿಕೊಂಡಿರುತ್ತಾರೆ. ಕಳೆದ ಒಂದು ಋತುವಿನಲ್ಲಿ ಅವರ ನಿರ್ಧಾರಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟತೆ ಹೊಂದಿರುತ್ತಾರೆ‘ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು,‘ಶುಭ್‌ಮನ್ ನಾಯಕತ್ವದಲ್ಲಿ ಹೌದು ಅಥವಾ ಇಲ್ಲ ಎಂಬ ಸ್ಪಷ್ಟತೆ ಇರುತ್ತದೆ. ಆಗಬಹುದು, ಇರಬಹುದು ಎಂಬ ಗೊಂದಲಕ್ಕೆ ಅವರಲ್ಲಿ ಯಾವುದೇ ಜಾಗವಿರುವುದಿಲ್ಲ. ಒಬ್ಬ ನಾಯಕನಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಗಿಲ್ ಖಂಡಿತವಾಗಿಯೂ ಅದನ್ನು ಹೊಂದಿದ್ದಾರೆ‘ ಎಂದರು.
ಗಿಲ್ ಅವರನ್ನು ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಯ ಕ್ರಿಕೆಟ್‌ಗೆ ತ್ವರಿತವಾಗಿ ನಾಯಕನನ್ನಾಗಿ ನೇಮಿಸಲಾಗುತ್ತಿದೆಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಕೂಡ ಪಾರ್ಥಿವ್ ಪಟೇಲ್ ಇದು ಭಾರತೀಯ ಕ್ರಿಕೆಟ್ ದೃಷ್ಟಿಯಿಂದ ಪ್ರಯೋಜನಕಾರಿ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುವ ಮೂಲಕ ಶುಭಮನ್ ನಾಯಕತ್ವ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ತಂಡವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ನೋಡಿದರೆ ಅರ್ಥವಾಗುತ್ತದೆ ಅವರು ಉತ್ತಮ ನಾಯಕನೆಂದು‘ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.