
ಕೋಲ್ಕತ್ತ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಹೊರಗುಳಿದಿದ್ದಾರೆ.
ಕುತ್ತಿಗೆ ನೋವಿನಿಂದ ಬಳಲುತ್ತಿರುವ ಅವರು ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂರನೇ ದಿನದಾಟ ಆರಂಭವಾಗುವ ಮುನ್ನ ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ.
ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಬ್ಯಾಟಿಂಗ್ ಮಾಡುವಾಗ ಗಿಲ್ ಕುತ್ತಿಗೆಯ ಗಾಯಕ್ಕೆ ಒಳಗಾಗಿದ್ದರು. ಔಟಾಗದೆ 4 ರನ್ ಗಳಿಸಿದ್ದಾಗ ಸ್ವಯಂ ಮೈದಾನದಿಂದ ಹೊರನಡೆದಿದ್ದರು.
‘ಕೋಲ್ಕತ್ತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ 2ನೇ ದಿನದಾಟದಂದು ನಾಯಕ ಶುಭಮನ್ ಗಿಲ್ ಕುತ್ತಿಗೆಯ ಗಾಯಕ್ಕೆ ಒಳಗಾಗಿದ್ದರು. ದಿನದಾಟ ಮುಗಿದ ನಂತರ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು’ಎಂದು ತಂಡದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಅವರು ಮುಂದುವರಿಯುವುದಿಲ್ಲ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಅದು ಹೇಳಿದೆ.
ಭಾರತ ಮೊದಲ ಇನ್ನಿಂಗ್ಸ್ ಆಡುತ್ತಿದ್ದಾಗ ಗಾಯಗೊಂಡು ನಿವೃತ್ತರಾದ ಕೆಲವು ಗಂಟೆಗಳ ನಂತರ, ಗಿಲ್ ಕುತ್ತಿಗೆ ತಿರುಗಿಸಲಾಗದಷ್ಟು ಕಷ್ಟಪಡುತ್ತಿದ್ದರು. ಬಳಿಕ, ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ ಎಸೆತವನ್ನು ಸ್ವೀಪ್ ಮಾಡಿದ ತಕ್ಷಣ ಗಿಲ್ ಅವರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತು. ಬಳಿಕ, ತಂಡದ ವೈದ್ಯಕೀಯ ಸಿಬ್ಬಂದಿಯಿಂದ ಕೆಲವು ಆರಂಭಿಕ ಚಿಕಿತ್ಸೆ ಪಡೆದ ನಂತರ ಮೈದಾನವನ್ನು ತೊರೆದಿದ್ದರು.
ಮೂರನೇ ದಿನದಿಂದ ಗಿಲ್ ಬದಲಿಗೆ ಉಪನಾಯಕ ರಿಷಭ್ ಪಂತ್ ತಂಡನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.