ADVERTISEMENT

ಕೊರೊನೋತ್ತರ ಕ್ರಿಕೆಟ್‌: ಮಳೆಯ ಮಧ್ಯೆ ಪುಟಿದ ಚೆಂಡು

ವೆಸ್ಟ್ ಇಂಡೀಸ್–ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯ

ಏಜೆನ್ಸೀಸ್
Published 8 ಜುಲೈ 2020, 19:31 IST
Last Updated 8 ಜುಲೈ 2020, 19:31 IST
ಮಂಡಿಯೂರಿ ಪ್ರತಿಭಟನೆ ವ್ಯಕ್ತಪಡಿಸಿದ ವಿಂಡೀಸ್ ಆಟಗಾರರು –ರಾಯಿಟರ್ಸ್ ಚಿತ್ರ
ಮಂಡಿಯೂರಿ ಪ್ರತಿಭಟನೆ ವ್ಯಕ್ತಪಡಿಸಿದ ವಿಂಡೀಸ್ ಆಟಗಾರರು –ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್: ಕೊರೊನೋತ್ತರ ಕಾಲದ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಚೆಂಡು ಬುಧವಾರ ಇಲ್ಲಿ ಪುಟಿಯಿತು.

ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಆತಿಥೇಯ ಇಂಗ್ಲೆಂಡ್ ತಂಡವು 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 35 ರನ್‌ ಗಳಿಸಿತು. ಚಹಾ ವಿರಾಮದ ಬಳಿಕ ಮತ್ತೆ ಮಳೆ ಸುರಿದ ಕಾರಣ ದಿನದಾಟವನ್ನು ಕೊನೆಗೊಳಿಸಲಾಯಿತು.

ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆಯಿಂದಾಗಿ ಕ್ರೀಡಾಂಗಣ ತೊಯ್ದು ತೊಪ್ಪೆಯಾಗಿತ್ತು. ಇದರಿಂದಾಗಿ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ಥ್, ರಿಚರ್ಡ್ ಕ್ಯಾಟಲ್‌ಬರೊ ಮತ್ತು ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಆಟ ಆರಂಭಿಸಲು ಹಸಿರು ನಿಶಾನೆ ನೀಡಲಿಲ್ಲ. ಮಧ್ಯಾಹ್ನ ವಾತಾವರಣ ತಿಳಿಗೊಂಡಿತು. ನಂತರ ಮೈದಾನದಲ್ಲಿದ್ದ ತೇವವೂ ಒಣಗಿತು. ಆಗ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್ ಡಾಮ್ ಸಿಬ್ಲಿ ಎರಡನೇ ಓವರ್‌ನಲ್ಲಿ ಆಘಾತ ಅನುಭವಿಸಿದರು. ವೇಗಿ ಶಾನನ್‌ ಗ್ಯಾಬ್ರಿಯಲ್ ಹಾಕಿದ ಎಸೆತವನ್ನು ಆಡುವಲ್ಲಿ ವಿಫಲರಾದ ಅವರು ಕ್ಲೀನ್‌ಬೌಲ್ಡ್ ಆದರು. ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ವಿಂಡೀಸ್ ಆಟಗಾರರು ಪರಸ್ಪರ ಕೈ ಕೈ ತಾಡಿಸಿ ಅಭಿನಂದಿಸಿದರು.

ಮಂಡಿಯೂರಿ ಪ್ರತಿಭಟನೆ: ವರ್ಣದ್ವೇಷದ ವಿರುದ್ಧ ಉಭಯ ತಂಡಗಳ ಆಟಗಾರರು ಮಂಡಿಯೂರಿ ಪ್ರತಿಭಟನೆ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ಈಚೆಗೆ ಆಫ್ರೊ ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ದೌರ್ಜನ್ಯದಲ್ಲಿ ಸಾವಿಗೀಡಾಗಿದ್ದರು. ಆಗ ವಿಶ್ವದೆಲ್ಲೆಡೆ ಜನಾಂಗೀಯ ತಾರತಮ್ಯದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು.

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಎಂಬ ಅಭಿಯಾನ ಆರಂಭವಾಗಿತ್ತು. ಈ ಪಂದ್ಯದಲ್ಲಿ ವಿಂಡೀಸ್ ಮತ್ತು ಇಂಗ್ಲೆಂಡ್ ಆಟಗಾರರು ಅಭಿಯಾನದ ಲೋಗೊ ಧರಿಸಿ ಕಣಕ್ಕಿಳಿದರು. ಕೊರೊನಾ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಲಾಗಿದೆ. ಐಸಿಸಿ ಮಾರ್ಗಸೂಚಿಗಳನ್ವಯ ಚೆಂಡಿಗೆ ಎಂಜಲು ಬಳಕೆಯನ್ನು ನಿಷೇಧಿಸಲಾಗಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 35 (ರೋರಿ ಬರ್ನ್ಸ್ ಬ್ಯಾಟಿಂಗ್ 20, ಜೋ ಡೆನ್ಲಿ ಬ್ಯಾಟಿಂಗ್ 14, ಶಾನನ್ ಗ್ಯಾಬ್ರಿಯಲ್ 19ಕ್ಕೆ1) ಮೊದಲ ದಿನದಾಟದ ಅಂತ್ಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.