ADVERTISEMENT

ಐಸಿಸಿ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್: ಅಗ್ರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್

ಪಿಟಿಐ
Published 25 ಜನವರಿ 2023, 10:01 IST
Last Updated 25 ಜನವರಿ 2023, 10:01 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ದುಬೈ: ಬುಧವಾರ ಬಿಡುಗಡೆಗೊಂಡ ಐಸಿಸಿ ಏಕದಿನ ಕ್ರಿಕೆಟ್ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ.

ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ಸಿರಾಜ್ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.

ಕಳೆದ 12 ತಿಂಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಿರಾಜ್, ಈ ತಿಂಗಳ ಆರಂಭದಲ್ಲಿ ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಒಬ್ಬ ವೇಗಿಯಾಗಿ ಎಷ್ಟರಮಟ್ಟಿಗೆ ಸುಧಾರಿಸಿದ್ದೇನೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ADVERTISEMENT

ಭಾರತದ ಬೌಲಿಂಗ್ ಕೋಚ್ ಪಾರಸ್ ಮ್ಹಾಂಬ್ರೆ, ಕಳೆದ ವರ್ಷ ಸಿರಾಜ್ ಅವರಿಗೆ ಅವರ ಆಟದ ಕೆಲ ಆಯಾಮಗಳ ಸುಧಾರಣೆಗೆ ಶ್ರಮ ವಹಿಸುವಂತೆ ಸೂಚಿಸಿದ್ದರು. ಈ ಸಂಬಂಧ ಗಮನ ಕೇಂದ್ರೀಕರಿಸಿದ್ದ ಸಿರಾಜ್ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 9 ವಿಕೆಟ್ ಪಡೆದಿದ್ದ ಸಿರಾಜ್, ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ್ದರು.

ಈ ಮೂಲಕ 729 ಪಾಯಿಂಟ್ಸ್ ಕಲೆ ಹಾಕಿದ ಮೊಹಮ್ಮದ್ ಸಿರಾಜ್ ಐಸಿಸಿ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಜಿಗಿದರು.

ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಿರಾಜ್ ಬೌಲಿಂಗ್ ಕೌಶಲ್ಯವನ್ನು ನಾಯಕ ರೋಹಿತ್ ಶರ್ಮಾ ಹಾಡಿ ಹೊಗಳಿದ್ದರು.

‘ಈ ಸರಣಿಯಲ್ಲಿ ಅವರ ಪ್ರದರ್ಶನ ನಿಜಕ್ಕೂ ಉತ್ತಮವಾಗಿತ್ತು. ತಂಡ ತನ್ನಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ಎಂದು ರೋಹಿತ್ ಹೇಳಿದ್ದರು.

ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿ 11 ಸ್ಥಾನ ಜಿಗಿದು 32ನೇ ಸ್ಥಾನಕ್ಕೆ ಏರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.