ADVERTISEMENT

ಐದು ವರ್ಷದ ಶಾಹೀದ್‌ಗೆ ಸಚಿನ್ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 16:25 IST
Last Updated 11 ಮಾರ್ಚ್ 2022, 16:25 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ಮುಂಬೈ : ಕೋಲ್ಕತ್ತದ ಐದು ವರ್ಷದ ಪೋರ ಎಸ್‌.ಕೆ. ಶಾಹೀದ್‌ಗೆ ಸಂತಸ ಈಗ ಮುಗಿಲುಮುಟ್ಟಿದೆ.ತನ್ನ ನೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನದಲ್ಲಿ ಐದು ದಿನಗಳ ಕಾಲ ತರಬೇತಿ ಪಡೆದ ಖುಷಿಯಲ್ಲಿ ಶಾಹೀದ್ ಇದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಚಿಕ್ಕ ವಯಸ್ಸಿನಲ್ಲಿಯೇ ಚೆಂದವಾಗಿ ಬ್ಯಾಟ್ ಬೀಸುವ ಕಲೆಯನ್ನು ಶಾಹೀದ್ ಕಲಿತಿದ್ದಾರೆ. ಅವರು ಬ್ಯಾಟಿಂಗ್ ಪ್ರಾಕ್ಟಿಸ್ ಮಾಡುವ ವಿಡಿಯೊವೊಂದನ್ನು ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು. ಅದು ಅಪಾರವಾಗಿ ಜನಪ್ರಿಯತೆ ಗಳಿಸಿತ್ತು.

ಹೋದ ತಿಂಗಳು ಈ ವಿಡಿಯೊ ವೀಕ್ಷಿಸಿದ್ದಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೂಡ ಮೆಚ್ಚಿಕೊಂಡಿದ್ದರು. ಅವರು ಶಾಹೀದ್‌ಗೆ ಶುಭಹಾರೈಸಿದ್ದರು.

ADVERTISEMENT

ಅಷ್ಟೇ ಅಲ್ಲ; ಸಚಿನ್ ತೆಂಡೂಲ್ಕರ್ ಅವರ ಗಮನವನ್ನೂ ಈ ವಿಡಿಯೊ ಸೆಳೆದಿತ್ತು. ಶಾಹೀದ್‌ಗೆ ಮಿಡಲೆಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಶಾಹೀದ್‌ಗೆ ಅಭ್ಯಾಸ ಮಾಡುವ ಅವಕಾಶ ನೀಡಲಾಯಿತು. ಅಲ್ಲಿ ಐದು ದಿನಗಳವರೆಗೆ ಸ್ವತಃ ಸಚಿನ್ ಹಾಜರಿದ್ದು ಶಾಹೀದ್‌ಗೆ ಮಾರ್ಗದರ್ಶನ ನೀಡಿದರು.

‘ನನ್ನ ಐದು ವರ್ಷದ ಮಗನಿಗೆ ಸಚಿನ್ ಸರ್ ಎಂದರೆ ಅಚ್ಚುಮೆಚ್ಚು. ಅವರನ್ನು ಭೇಟಿಯಾಗುವ ಆಸೆ ಅವನಿಗಿತ್ತು. ಕ್ರಿಕೆಟಿಗನಾಗುವ ಗುರಿ ಹೊಂದಿದ್ದಾರೆ. ಸಚಿನ್ ಅವರು ನಮಗೆ ಈಗ ಮಾಡಿರುವ ಉಪಕಾರಕ್ಕೆ ಕೃತಜ್ಞತೆ ಹೇಳಲು ಪದಗಳು ಸಾಲುತ್ತಿಲ್ಲ‘ ಎಂದು ಶಾಹೀದ್ ತಂದೆ ಶೇಖ್ ಶಂಶೇರ್ ಶುಕ್ರವಾರ ಹೇಳಿದರು. ಅವರು ಕ್ಷೌರದಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಾರೆ.

‘ಶಾಹೀದ್ ಬ್ಯಾಟಿಂಗ್ ವಿಡಿಯೊವನ್ನು ನಾವು ಟ್ವಿಟರ್‌ನಲ್ಲಿ ಹಾಕಿದ್ದೆವು. ಅದನ್ನ ಆಸ್ಟ್ರೇಲಿಯಾದ ವಾಹಿನಿ ಫಾಕ್ಸ್‌ ಕ್ರಿಕೆಟ್ ಕೂಡ ಟ್ವೀಟ್ ಮಾಡಿತು. ಅಲ್ಲದೇ ಸಚಿನ್ ತೆಂಡೂಲ್ಕರ್ ಮತ್ತು ವಾರ್ನ್ ಅವರಿಗೆ ಟ್ಯಾಗ್ ಮಾಡಿತ್ತು. ಇದನ್ನು ಸಚಿನ್ ವೀಕ್ಷಿಸಿದ ನಂತರ ತಂಡವು ನಮ್ಮನ್ನು ಸಂಪರ್ಕಿಸಿತು’ ಎಂದು ಶೇಖ್ ನೆನಪಿಸಿಕೊಳ್ಳುತ್ತಾರೆ.

ಶಾಹೀದ್ ಮತ್ತು ಕುಟುಂಬವು ಕೋಲ್ಕತ್ತದಿಂದ ಮುಂಬೈಗೆ ಪ್ರಯಾಣ ಮಾಡಿದ ವೆಚ್ಚವನ್ನು ಸಚಿನ್ ಅವರೇ ಭರಿಸಿದ್ದರು. ಕುಟುಂಬಕ್ಕೆ ಉಳಿದುಕೊಳ್ಳಲು ಅತಿಥಿ ಗೃಹದ ವ್ಯವಸ್ಥೆಯನ್ನೂ ಮಾಡಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.