ADVERTISEMENT

ನಿರೀಕ್ಷೆಗಳ ಗರಿಗೆದರಿಸಿದ ಗಂಗೂಲಿ–ದ್ರಾವಿಡ್ ಭೇಟಿ

ಎನ್‌ಸಿಎ, ಬಿಸಿಸಿಐ ಕಟ್ಟಡ ಅಭಿವೃದ್ಧಿಗೆ ಚಾಲನೆ ಸಾಧ್ಯತೆ

ಗಿರೀಶದೊಡ್ಡಮನಿ
Published 29 ಅಕ್ಟೋಬರ್ 2019, 20:06 IST
Last Updated 29 ಅಕ್ಟೋಬರ್ 2019, 20:06 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಬೆಂಗಳೂರು: ಕ್ರಿಕೆಟ್‌ ಅಭಿಮಾನಿಗಳ ವಲಯದಲ್ಲಿ ‘ದಾದಾ’ ಮತ್ತು ‘ಗೋಡೆ’ ಎಂದೇ ಖ್ಯಾತರಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರಿಬ್ಬರ ಬುಧವಾರದ ಭೇಟಿಯು ಹಲವು ನಿರೀಕ್ಷೆಗಳನ್ನು ಮೂಡಿಸಿದೆ.

ನನೆಗುದಿಗೆ ಬಿದ್ದಿರುವ ಹಲವು ಯೋಜನೆಗಳಿಗೆ ಚಾಲನೆ ಸಿಗುವ ಆಸೆ ಗರಿಗೆದರಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಇರುವ ಕೆಎಸ್‌ಸಿಎ ಜಮೀನಿನಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮತ್ತು ಬಿಸಿಸಿಐ ಮುಖ್ಯ ಕಚೇರಿ ಕಟ್ಟಡ ಕಾಮಗಾರಿಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

2000ನೇ ಇಸವಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್‌ಸಿಎ ಆರಂಭವಾಯಿತು. ಗಾಯಗೊಂಡ ಕ್ರಿಕೆಟ್ ಆಟಗಾರರಿಗೆ ಪುನಶ್ಚೇತನ, ತಂಡಗಳಿಗೆ ವಿಶೇಷ ಶಿಬಿರಗಳನ್ನು ಆಯೋಜಿಸುವ ಕಾರ್ಯವನ್ನು ಎನ್‌ಸಿಎ
ಮಾಡುತ್ತಿದೆ. ಇದರ ಮೊದಲ ಅಧ್ಯಕ್ಷರಾಗಿ ರಾಜ್‌ಸಿಂಗ್ ಡುಂಗರಪುರ್ ಕಾರ್ಯನಿರ್ವಹಿಸಿದ್ದರು. ಅವರ ನಂತರ ಸುನಿಲ್ ಗಾವಸ್ಕರ್ (2001 ರಿಂದ 2005), ಕಪಿಲ್ ದೇವ್ (2006), ರವಿಶಾಸ್ತ್ರಿ (2007), ಅನಿಲ್ ಕುಂಬ್ಳೆ (2010–12 ಮತ್ತು 2014) ಅವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಶಿವಲಾಲ್ ಯಾದವ್, ಸಂದೀಪ್ ಪಾಟೀಲ, ಡೇವ್ ವಾಟ್ಮೋರ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

‘ಹೋದ ಎರಡು ದಶಕಗಳಲ್ಲಿ ಕ್ರಿಕೆಟ್‌ ಬೆಳೆದಂತೆ ಈ ಅಕಾಡೆಮಿಯ ಮೇಲೆ ಕಾರ್ಯದ ಮೇಲೂ ಒತ್ತಡ ಹೆಚ್ಚಾಗಿದೆ. ಇನ್ನೂ ವಿಶಾಲವಾದ ಸ್ಥಳ ಬೇಕಿದೆ. ಅದರಿಂದ ಆಟಗಾರರು ಮತ್ತು ಸಿಬ್ಬಂದಿಯ ತರಬೇತಿ, ಪುನಶ್ಚೇತನಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯ’ ಎಂದು ಎನ್‌ಸಿಎ ಮೂಲಗಳು ಹೇಳಿವೆ.

2017ರಿಂದ ಇಲ್ಲಿಯವರೆಗೆ ಬಿಸಿಸಿಐನಲ್ಲಿ ಮಧ್ಯಂತರ ಆಡಳಿತ ಸಮಿತಿ ಮತ್ತು ಸಿಒಎ ಆಡಳಿತ ಇದ್ದ ಕಾರಣ ಈ ಕಾರ್ಯ ಕುಂಠಿತಗೊಂಡಿತ್ತು. ಈಚೆಗೆ ಸೌರವ್ ಗಂಗೂಲಿ ನೇತೃತ್ವದ ಆಡಳಿತ ಸಮಿತಿಯು ಬಿಸಿಸಿಐನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಆಡಳಿತವನ್ನು ರೋಜರ್‌ ಬಿನ್ನಿ ಅಧ್ಯಕ್ಷತೆಯ ಮಂಡಳಿಯು ನಿರ್ವಹಿಸುತ್ತಿದೆ. ಇದರಿಂದಾಗಿ ಎನ್‌ಸಿಎ ಮೇಲ್ದರ್ಜೆಗೇರಿಸುವ ಮತ್ತು ಹೊಸ ಜಮೀನಿನಲ್ಲಿ ಮೂಲಸೌಲಭ್ಯ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ಸಿಗುವ ನಿರೀಕ್ಷೆ ಮೂಡಿದೆ. ಆದ್ದರಿಂದ ಬುಧವಾರದ ಸಭೆಯು ಮಹತ್ವದ್ದಾಗಿದೆ ಎನ್ನಲಾಗಿದೆ.

‘ಗಂಗೂಲಿ ಎನ್‌ಸಿಎಗೆ ಬರುತ್ತಿದ್ದಾರೆ. ಕೆಎಸ್‌ಸಿಎಗೂ ಅವರನ್ನು ಆಮಂತ್ರಿಸಿದ್ದೇವೆ. ಅವರೊಂದಿಗೆ ನಮ್ಮ ಆಡಳಿತ ಮಂಡಳಿಯು ಸಮಾಲೋಚನೆ ನಡೆಸಲು ಉತ್ಸುಕವಾಗಿದೆ’ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.