ADVERTISEMENT

ದಕ್ಷಿಣ ಆಫ್ರಿಕಾ: ಏಕದಿನ ಸರಣಿಯ ಕೊನೆಯ ಪಂದ್ಯ– ಸಮಾಧಾನಕರ ಜಯದತ್ತ ಭಾರತದ ಚಿತ್ತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 1:12 IST
Last Updated 23 ಜನವರಿ 2022, 1:12 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕ್ಲೀನ್‌ಸ್ವೀಪ್ ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಭಾರತ ತಂಡ ಇದೆ.

ಟೆಸ್ಟ್ ಸರಣಿ ಸೋಲು. ಏಕದಿನ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ನಿರಾಶೆ ಅನುಭವಿಸಿರುವ ಪ್ರವಾಸಿ ಬಳಗವು ಕೆಲವು ಆಟಗಾರರ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಅದರಲ್ಲೂ ಬೌಲಿಂಗ್‌ ವಿಭಾಗದಲ್ಲಿ ವೈಫಲ್ಯ ಅನುಭವಿಸಿರುವ ಭುವನೇಶ್ವರ್ ಕುಮಾರ್ ಮತ್ತು ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.

ADVERTISEMENT

ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕವು ತೆಂಬಾ ಬವುಮಾ, ವ್ಯಾನ್ ಡರ್ ರಸಿ ಅವರಿಂದಾಗಿ ತುಂಬಾ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರಂಭಿಕ ಜೋಡಿಯೂ ಮಿಂಚಿತ್ತು. ಆದ್ದರಿಂದ ಮೊದಲ ಐದು ಕ್ರಮಾಂಕದ ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವ ಸವಾಲು ಭಾರತದ ಮುಂದಿದೆ. ಜಸ್‌ಪ್ರೀತ್ ಬೂಮ್ರಾ ಮತ್ತು ಶಾರ್ದೂಲ್ ಠಾಕೂರ್ ಉತ್ತಮ ಲಯದಲ್ಲಿದ್ದಾರೆ. ಠಾಕೂರ್ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದ್ದಾರೆ.

ರಾಹುಲ್, ಶಿಖರ್ ಉತ್ತಮ ಆರಂಭ ನೀಡಿದರೆ ತಂಡದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಬಹುದು. ವಿರಾಟ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚಬಹುದು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ವಿಶ್ವಾಸಾರ್ಹ ಬ್ಯಾಟರ್‌ ಆಗಿದ್ದಾರೆ.

ಈ ಪಂದ್ಯದಲ್ಲಿ ಭುವಿ ಬದಲು ನವದೀಪ್ ಸೈನಿ ಸ್ಥಾನ ಪಡೆಯಬಹುದು. ಶಿಖರ್‌ಗೆ ವಿಶ್ರಾಂತಿ ಕೊಟ್ಟರೆ ಋತುರಾಜ್ ಗಾಯಕವಾಡ್ ನಾಯಕನೊಂದಿಗೆ ಇನಿಂಗ್ಸ್ ಆರಂಭಿಸಬಹುದು.

ಈ ಪ್ರವಾಸದಲ್ಲಿ ಮೊದಲ ಟೆಸ್ಟ್‌ನಲ್ಲಿ ಮಾತ್ರ ಜಯಿಸಿರುವ ಭಾರತ ಅನುಭವಿಸಿರುವ ನಿರಾಶೆಯ ಸರಪಳಿ ಕಳಚಲು ಇದು ಕೊನೆಯ ಅವಕಾಶವಾಗಿದೆ.

ತಂಡಗಳು
ಭಾರತ:
ಕೆ.ಎಲ್. ರಾಹುಲ್ (ನಾಯಕ), ಜಸ್‌ಪ್ರೀತ್ ಬೂಮ್ರಾ, ಶಿಖರ್ ಧವನ್, ಋತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಜುಬೈರ್ ಹಮ್ಜಾ, ಮಾರ್ಕೊ ಜ್ಯಾನ್ಸೆನ್, ಜಾನೆಮನ್ ಮಲಾನ್, ಸಿಸಾಂದ ಮಗಾಲ, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ವೇಯ್ನ್ ಪಾರ್ನೆಲ್, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರಸಿ ವ್ಯಾನ್ ಡರ್ ಡಸೆನ್, ಕೈಲ್ ವೆರೆಯನ್.

ಪಂದ್ಯ ಆರಂಭ: ಮಧ್ಯಾಹ್ನ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.