ADVERTISEMENT

ಮಹಿಳೆಯರ ಏಕದಿನ ಕ್ರಿಕೆಟ್‌ ಸರಣಿ: ಕೊನೆಯ ಪಂದ್ಯದಲ್ಲೂ ಭಾರತಕ್ಕೆ ನಿರಾಸೆ

ಮಿಥಾಲಿ ರಾಜ್ ಅರ್ಧಶತಕ; ಪ್ರೀಜ್–ಬಾಶ್ 96 ರನ್‌ಗಳ ಜೊತೆಯಾಟ

ಪಿಟಿಐ
Published 17 ಮಾರ್ಚ್ 2021, 13:28 IST
Last Updated 17 ಮಾರ್ಚ್ 2021, 13:28 IST
ಮಿಥಾಲಿ ರಾಜ್ –ಟ್ವಿಟರ್ ಚಿತ್ರ
ಮಿಥಾಲಿ ರಾಜ್ –ಟ್ವಿಟರ್ ಚಿತ್ರ   

ಲಖನೌ: ಮೂರು ಪಂದ್ಯಗಳಲ್ಲಿ ಸೋತು ಸರಣಿ ಕೈಚೆಲ್ಲಿದ್ದ ಭಾರತ ಮಹಿಳಾ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನವೂ ವಿಫಲಗೊಂಡಿತು. ಇಲ್ಲಿನ ಏಕಾನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಐದು ವಿಕೆಟ್‌ಗಳಿಂದ ಜಯ ಗಳಿಸಿ 4–1ರಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ನಾಯಕಿ ಮಿಥಾಲಿ ರಾಜ್ (79; 104 ಎಸೆತ, 8 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ನಡೆಸಿದರು. ಹರ್ಮನ್‌ಪ್ರೀತ್ ಕೌರ್ ಉತ್ತಮ ಲಯದಲ್ಲಿದ್ದಾಗಲೇ ಗಾಯಗೊಂಡು ನಿವೃತ್ತಿ ಪಡೆದುಕೊಂಡರು. ಇವರಿಬ್ಬರನ್ನು ಒಳಗೊಂಡಂತೆ ಅಗ್ರ ಕ್ರಮಾಂಕದ ಐವರು ಮಾತ್ರ ಎರಡಂಕಿ ಮೊತ್ತ ದಾಟಿದರು.

ಭಾರತವನ್ನು 188 ರನ್‌ಗಳಿಗೆ ಆಲೌಟ್ ಮಾಡಿದ ದಕ್ಷಿಣ ಆಫ್ರಿಕಾ 48,2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. 27 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದ ಮಿಗ್ನನ್ ಡು ಪ್ರೀಜ್ (57; 100 ಎ, 4 ಬೌಂ) ಮತ್ತು ಅನೆಕಿ ಬಾಶ್ (58; 70 ಎ, 8 ಬೌಂ) ಅಮೋಘ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾದರು. ಮರಿಜನೆ ಕಾಪ್ ಮತ್ತು ನಡೈನ್ ಡಿ ಕ್ಲಾರ್ಕ್‌ ಕೊನೆಯಲ್ಲಿ ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು.

ADVERTISEMENT

ಟೂರ್ನಿಯುದ್ದಕ್ಕೂ ಮೋಹಕ ಬ್ಯಾಟಿಂಗ್ ಪ್ರದರ್ಶಿಸಿದ ಲೌರಾ ವೊಲ್ವರ್ಟ್ ಅವರನ್ನು ಶೂನ್ಯಕ್ಕೆ ವಾಪಸ್ ಕಳುಹಿಸುವಲ್ಲಿ ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಯಶಸ್ವಿಯಾದರು. ಆಗ ತಂಡದ ಮೊತ್ತ ಕೇವಲ ಒಂದು ರನ್ ಆಗಿತ್ತು. ತಮ್ಮ ಮುಂದಿನ ಓವರ್‌ನಲ್ಲಿ ರಾಜೇಶ್ವರಿ ಮೂರನೇ ಕ್ರಮಾಂಕದ ಲಾರಾ ಗೊಡಾಲ್ ವಿಕೆಟ್‌ ಕೂಡ ಉರುಳಿಸಿದರು. ಮೂರು ರನ್‌ಗಳಿಗೆ ಇಬ್ಬರನ್ನು ಕಳೆದುಕೊಂಡ ತಂಡ 11ನೇ ಓವರ್‌ನಲ್ಲಿ ನಾಯಕಿ ಸುನೆ ಲೂಜ್ ವಿಕೆಟ್ ಉರುಳಿದಾಗ ತೀವ್ರ ಸಂಕಷ್ಟಕ್ಕೆ ಸಿಲುಕಿತು. 10 ರನ್ ಗಳಿಸಿದ್ದ ಸುನೆ, ಆಫ್‌ಸ್ಪಿನ್ನರ್‌ ದಯಾಳನ್ ಹೇಮಲತಾಗೆ ವಿಕೆಟ್ ಒಪ್ಪಿಸಿದರು.

ಆದರೆ ಡು ಪ್ರೀಜ್ ಮತ್ತು ಬಾಶ್ 96 ರನ್‌ಗಳ ಜೊತೆಯಾಟದ ಮೂಲಕ ಭರವಸೆ ತುಂಬಿದರು. 131 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದಾಗ ತಂಡದ ಗೆಲುವಿಗೆ 13 ಓವರ್‌ಗಳಲ್ಲಿ 58 ರನ್ ಬೇಕಾಗಿತ್ತು. ಈ ಸವಾಲನ್ನು ಕಾಪ್ ಮತ್ತು ಕ್ಲರ್ಕ್ ದಿಟ್ಟವಾಗಿ ಎದುರಿಸಿದರು.

ಮಿಥಾಲಿ ರಾಜ್‌ ಮೋಹಕ ಬ್ಯಾಟಿಂಗ್

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತವೂ ಮೂರು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತ್ತು. 13ನೇ ಓವರ್‌ ಆಗುವಷ್ಟರಲ್ಲಿ ಪ್ರಿಯಾ ಪೂನಿಯಾ, ಪೂನಂ ರಾವತ್ ಮತ್ತು ಸ್ಮೃತಿ ಮಂದಾನ ಅವರನ್ನು ಕಳೆದುಕೊಂಡಿದ್ದ ತಂಡದ ಇನಿಂಗ್ಸ್‌ಗೆ ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೌರ್ ಬಲ ತುಂಬಿದರು. ನಾಲ್ಕನೇ ವಿಕೆಟ್‌ಗೆ 71 ರನ್ ಸೇರಿಸಿದ್ದಾಗ, 31ನೇ ಓವರ್‌ನಲ್ಲಿ ಹರ್ಮ್‌ನ್‌ಪ್ರೀತ್‌ ಗಾಯಗೊಂಡು ವಾಪಸಾದರು.

ನಂತರ ಒಂದರ ಹಿಂದೆ ಒಂದು ವಿಕೆಟ್‌ಗಳು ಉರುಳುತ್ತ ಸಾಗಿದವು. ಮಿಥಾಲಿ ಮೋಹಕ ಹೊಡೆತಗಳ ಮೂಲಕ ರಂಜಿಸಿ ಅರ್ಧಶತಕ ಗಳಿಸಿದರು; ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ನೆರವಾದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.