ADVERTISEMENT

ಕೋಲ್ಕತ್ತಕ್ಕೆ ಬಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರು

ಪಿಟಿಐ
Published 16 ಮಾರ್ಚ್ 2020, 20:15 IST
Last Updated 16 ಮಾರ್ಚ್ 2020, 20:15 IST
ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್‌ ಡು ಪ್ಲೆಸಿ, ಸಹ ಆಟಗಾರರ ಜೊತೆ ಸೋಮವಾರ ಕೋಲ್ಕತ್ತದ ಹೋಟೆಲ್‌ಗೆ ಬಂದ ಕ್ಷಣ –ಎಎಫ್‌ಪಿ ಚಿತ್ರ
ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್‌ ಡು ಪ್ಲೆಸಿ, ಸಹ ಆಟಗಾರರ ಜೊತೆ ಸೋಮವಾರ ಕೋಲ್ಕತ್ತದ ಹೋಟೆಲ್‌ಗೆ ಬಂದ ಕ್ಷಣ –ಎಎಫ್‌ಪಿ ಚಿತ್ರ   

ಕೋಲ್ಕತ್ತ: ಕ್ವಿಂಟನ್‌ ಡಿ ಕಾಕ್‌ ನೇತೃತ್ವದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರರು ಸೋಮವಾರ ಕೋಲ್ಕತ್ತಕ್ಕೆ ಬಂದಿಳಿದಿದ್ದಾರೆ.

ಕೊರೊನಾ ಭೀತಿಯಿಂದಾಗಿ ಭಾರತದ ಎದುರಿನ ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ರದ್ದಾಗಿದ್ದವು. ಹೀಗಾಗಿ ಆಟಗಾರರು ಮತ್ತು ನೆರವು ಸಿಬ್ಬಂದಿ ಎರಡನೇ ಪಂದ್ಯ ನಡೆಯಬೇಕಿದ್ದ ಲಖನೌದಲ್ಲೇ ತಂಗಿದ್ದರು.

ಸೋಮವಾರ ಸುಭಾಷ್‌ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರನ್ನು ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಅಭಿಷೇಕ್‌ ದಾಲ್ಮಿಯಾ, ಕಾರ್ಯದರ್ಶಿ ಸ್ನೇಹಶಿಶ್‌ ಗಂಗೂಲಿ ಹಾಗೂ ಜಂಟಿ ಕಾರ್ಯದರ್ಶಿ ದೇವವ್ರತ ದಾಸ್‌ ಅವರು ಬರಮಾಡಿಕೊಂಡರು.

ADVERTISEMENT

‘ಆಟಗಾರರು ಮತ್ತು ನೆರವು ಸಿಬ್ಬಂದಿಯ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮೂರು ಮಂದಿಯ ವೈದ್ಯಕೀಯ ತಂಡ ಎಲ್ಲರ ಮೇಲೆ ನಿಗಾ ಇಟ್ಟಿದೆ’ ಎಂದು ವೈದ್ಯಕೀಯ ಸಮಿತಿಯ ಮುಖ್ಯಸ್ಥ ಪ್ರದೀಪ್‌ ಡೇ ತಿಳಿಸಿದ್ದಾರೆ.

‘ಆಟಗಾರರು ಮತ್ತು ಸಿಬ್ಬಂದಿಗೆ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅವರು ತಂಗುವ ಕೊಠಡಿಗಳಲ್ಲಿ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ನಮ್ಮ ವೈದ್ಯಕೀಯ ತಂಡವೂ ಹೋಟೆಲ್‌ನಲ್ಲೇ ಇರಲಿದೆ’ ಎಂದು ಅಭಿಷೇಕ್‌ ಹೇಳಿದ್ದಾರೆ.

ಆಟಗಾರರು ಮಂಗಳವಾರ ಬೆಳಿಗ್ಗೆ ಕೋಲ್ಕತ್ತದಿಂದ ದುಬೈಗೆ ತೆರಳಲಿದ್ದಾರೆ. ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ತಂಡವು ಈ ಮೊದಲು ಲಖನೌದಿಂದ ದೆಹಲಿ ಮಾರ್ಗವಾಗಿ ತವರಿಗೆ ಹೋಗಬೇಕಿತ್ತು. ಕೋಲ್ಕತ್ತದಲ್ಲಿ ಇದುವರೆಗೆ ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಈ ನಗರವನ್ನು ಸುರಕ್ಷಿತ ತಾಣವೆಂದು ಆಯ್ಕೆ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.