ADVERTISEMENT

ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್‌ಒಪಿ ರೂಪಿಸಲು ಸಚಿವಾಲಯ ಸಲಹೆ

ಪಿಟಿಐ
Published 21 ಜನವರಿ 2026, 14:07 IST
Last Updated 21 ಜನವರಿ 2026, 14:07 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನವದೆಹಲಿ: ಒಲಿಂಪಿಕ್ಸ್‌ ಆತಿಥ್ಯದ ಆಕಾಂಕ್ಷೆ ಹೊಂದಿರುವ ವೇಳೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಸನ್ನಿವೇಶ ತಪ್ಪಿಸಲು ಕ್ರೀಡಾ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ. ಇಂಡಿಯಾ ಓಪನ್ ಬ್ಯಾಡ್ಮಿಂಟನ್ ವೇಳೆ ಆದ ಅವ್ಯವಸ್ಥೆಯನ್ನು ತಪ್ಪಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸುವಂತೆ ಸಚಿವಾಲಯವು ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಸೂಚಿಸಿದೆ.

ಪಂದ್ಯದ ವೇಳೆ ಹಕ್ಕಿ ಹಿಕ್ಕೆ ಹಾಕಿದ್ದು, ಪ್ರೇಕ್ಷಕರ ಗ್ಯಾಲರಿಯಲ್ಲಿ ಕೋತಿ ಪ್ರತ್ಯಕ್ಷವಾಗಿದ್ದು, ಅನೈರ್ಮಲ್ಯ, ನಿರ್ವಹಣೆಯಿಲ್ಲದ ಸಲಕರಣೆ, ಸೌಲಭ್ಯಗಳಿಂದಾಗಿ ಇಂಡಿಯಾ ಓಪನ್ ಟೂರ್ನಿಯ ಆತಿಥ್ಯ ವಹಿಸಿದ್ದ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದ ವರ್ಚಸ್ಸಿಗೆ ಧಕ್ಕೆಯಾಗಿತ್ತು.

‘ಸ್ಪರ್ಧೆಗಳನ್ನು ನಡೆಸಲು ರಾಷ್ಟ್ರೀಯ ಕ್ರಿಡಾ ಫೆಡರೇಷನ್‌ಗಳಿಗೆ ನಾವು ಹೆಚ್ಚಿನ ಸ್ವಾತಂತ್ರ್ಯ ನೀಡಿದ್ದೇವೆ. ಆದರೆ ಸಂಘಟನೆ ವೇಳೆ ಲೋಪದೋಷಗಳು ಕಂಡುಬಂದರೆ, ಎಲ್ಲರೂ ಕ್ರೀಡಾ ಸಚಿವಾಲಯದ ಉತ್ತರದಾಯಿತ್ವ ನಿರೀಕ್ಷಿಸುತ್ತಾರೆ. ಹೀಗಾಗಿ ಯೋಜನಾ ಹಂತದಲ್ಲೇ ಸಚಿವಾಲಯ ಒಳಗೊಳ್ಳುವುದು ಯೋಗ್ಯ’ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ADVERTISEMENT

ಹೀಗಾಗಿ ಭಾರತದಲ್ಲಿ ನಡೆಯುವ ಪ್ರತಿಯೊಂದು ಅಂತರರಾಷ್ಟ್ರೀಯ ಪಂದ್ಯಾವಳಿಗೆ ಎಸ್‌ಒಪಿ ರೂಪಿಸಲಾಗುವುದು. ಇದರಿಂದ ಕ್ರೀಡಾಪಟುಗಳಿಗೆ, ವಿಶೇಷವಾಗಿ ಅಂತರರಾಷ್ಟ್ರೀಯ ಸ್ಪರ್ಧಿಗಳಿಗೆ ಮುಜುಗರ ತಪ್ಪಿಸಬಹುದು ಎಂದೂ ತಿಳಿಸಿದೆ.

ಇಂಡಿಯಾ ಓಪನ್‌ನಲ್ಲಿ ಅವ್ಯವಸ್ಥೆಯ ಬಗ್ಗೆ ಡೆನ್ಮಾರ್ಕ್‌ ಆಟಗಾರ ಮಿಯಾ ಬ್ಲಿಚ್‌ಫೆಲ್ಟ್ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ಗಾದರೂ (ಇದಕ್ಕೂ ಭಾರತದ ಆತಿಥ್ಯವಿದೆ) ಒಳ್ಳೆಯ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.