ADVERTISEMENT

PAK vs SL | ಹತ್ತು ವರ್ಷಗಳ ಬಳಿಕ ಮತ್ತೆ ಪಾಕ್‌ಗೆ ಬಂದ ಲಂಕಾ ತಂಡ

ಟೆಸ್ಟ್‌ ಕ್ರಿಕೆಟ್‌ ಕಲರವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:15 IST
Last Updated 9 ಡಿಸೆಂಬರ್ 2019, 13:15 IST
   

ಇಸ್ಲಾಮಾಬಾದ್‌: ಸುದೀರ್ಘ ಹತ್ತು ವರ್ಷಗಳ ಬಳಿಕ ಶ್ರೀಲಂಕಾ ತಂಡ ಪಾಕಿಸ್ತಾನದಲ್ಲಿಟೆಸ್ಟ್‌ ಕ್ರಿಕೆಟ್‌ ಆಡಲು ಸಜ್ಜಾಗಿದೆ. 2009ರಲ್ಲಿ ಪಾಕಿಸ್ತಾನದಲ್ಲಿ ದ್ವೀಪರಾಷ್ಟ್ರದ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಆ ಬಳಿಕ ತಂಡ ಪಾಕ್ ಪ್ರವಾಸ ಕೈಗೊಂಡಿರಲಿಲ್ಲ.

‘ಇಸ್ಲಾಮಾಬಾದ್‌ಗೆ ತಲುಪಿದ್ದೇವೆ’ ಎಂದು ಆಟಗಾರರು ಇರುವ ವಿಡಿಯೊವನ್ನುಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು(ಪಿಸಿಬಿ) ಟ್ವೀಟ್‌ ಮಾಡಿದೆ. ‘ಇದು ಐತಿಹಾಸಿಕ ಕ್ಷಣ’ ಎಂದು ಪಿಸಿಬಿ ಕಾರ್ಯನಿರ್ವಾಹಕ ಅಧಿಕಾರಿ ವಸೀಂ ಖಾನ್‌ ನುಡಿದಿದ್ದಾರೆ.

ಬಿಗಿ ಭದ್ರತೆಯಲ್ಲಿ ಆತಿಥೇಯ ತಂಡದ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಶ್ರೀಲಂಕಾ ಆಡಲಿದೆ. ಮೊದಲ ಪಂದ್ಯವು ಪಾಕಿಸ್ತಾನ ಸೇನಾ ಮುಖ್ಯಕಚೇರಿ ಇರುವ ರಾವಲ್ಪಿಂಡಿಯಲ್ಲಿ ಡಿ.11ರಿಂದ ಹಾಗೂ ಇನ್ನೊಂದು ಪಂದ್ಯ ಕರಾಚಿಯಲ್ಲಿ 19ರಿಂದ ಆಯೋಜಿತವಾಗಿದೆ.

2009ರ ಭಯೋತ್ಪಾದಕ ದಾಳಿಯ ಬಳಿಕ ಇಲ್ಲಿ ಟೆಸ್ಟ್‌ ಕ್ರಿಕೆಟ್‌ ನಡೆದಿಲ್ಲ. ಆ ವರ್ಷದ ಮಾರ್ಚ್‌ ತಿಂಗಳಲ್ಲಿ ಶ್ರೀಲಂಕಾ ಆಟಗಾರರು ಲಾಹೋರ್‌ಗೆ ಟೆಸ್ಟ್ ಪಂದ್ಯವಾಡಲು ತೆರಳುತ್ತಿದ್ದ ವೇಳೆ ನಡೆದ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಆಟಗಾರರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದರು.

ಈ ದಾಳಿಯಿಂದ ಉಂಟಾದ ಅಭದ್ರತೆಯ ಆತಂಕದಿಂದಾಗಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಬೇರೆ ರಾಷ್ಟ್ರಗಳ ತಂಡಗಳು ನಿರಾಕರಿಸಿದ್ದವು. ಹಲವು ಟೂರ್ನಿಗಳ ಆತಿಥ್ಯವನ್ನು ಆ ದೇಶ ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.