ADVERTISEMENT

ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ

ಕ್ರಿಕೆಟ್‌ ಟೆಸ್ಟ್‌: ಅಸಿತಾ, ಲಾಹಿರು ಪ್ರಭಾವಿ ಬೌಲಿಂಗ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 12:55 IST
Last Updated 10 ಮಾರ್ಚ್ 2023, 12:55 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಅಸಿತಾ ಫೆರ್ನಾಂಡೊ –ಎಎಫ್‌ಪಿ ಚಿತ್ರ
ವಿಕೆಟ್‌ ಪಡೆದ ಸಂಭ್ರಮದಲ್ಲಿ ಅಸಿತಾ ಫೆರ್ನಾಂಡೊ –ಎಎಫ್‌ಪಿ ಚಿತ್ರ   

ಕ್ರೈಸ್ಟ್‌ಚರ್ಚ್‌: ಬಿಗುವಾದ ಬೌಲಿಂಗ್‌ ನಡೆಸಿದ ಶ್ರೀಲಂಕಾ ತಂಡ, ನ್ಯೂಜಿಲೆಂಡ್‌ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆಯತ್ತ ಹೆಜ್ಜೆಯಿಟ್ಟಿದೆ.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 355 ರನ್‌ ಗಳಿಸಿದ ಪ್ರವಾಸಿ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್‌ ತಂಡವನ್ನು 5 ವಿಕೆಟ್‌ಗಳಿಗೆ 162 ರನ್‌ಗಳಿಗೆ ನಿಯಂತ್ರಿಸಿದೆ. ಆತಿಥೇಯ ತಂಡ ಇನ್ನೂ 193 ರನ್‌ಗಳಿಂದ ಹಿನ್ನಡೆಯಲ್ಲಿದೆ.

ಟಾಮ್‌ ಲಥಾಮ್‌ (67 ರನ್‌) ಮತ್ತು ಡೆವೊನ್‌ ಕಾನ್ವೆ (30 ರನ್‌) ಮೊದಲ ವಿಕೆಟ್‌ಗೆ 67 ರನ್‌ ಸೇರಿಸಿ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ನೀಡಿದರು. ಆ ಬಳಿಕ ಅಸಿತಾ ಫೆರ್ನಾಂಡೊ (42ಕ್ಕೆ 2) ಮತ್ತು ಲಾಹಿರು ಕುಮಾರ (34ಕ್ಕೆ 2) ಕೈಚಳಕ ತೋರಿದರು. ಆರಂಭಿಕ ಬ್ಯಾಟರ್‌ಗಳಿಬ್ಬರನ್ನೂ ಅಸಿತಾ ಪೆವಿಲಿಯನ್‌ಗೆ ಕಳುಹಿಸಿದರು.

ADVERTISEMENT

ಕೇನ್‌ ವಿಲಿಯಮ್ಸನ್‌ (1) ಮತ್ತು ಹೆನ್ರಿ ನಿಲೊಲಸ್ (2) ಅವರನ್ನು ಲಾಹಿರು ಬೇಗನೇ ಔಟ್‌ ಮಾಡಿದರು. ಡೆರಿಲ್‌ ಮಿಚೆಲ್‌ (ಬ್ಯಾಟಿಂಗ್‌ 40) ಮತ್ತು ಮೈಕಲ್‌ ಬ್ರೇಸ್‌ವೆಲ್‌ (ಬ್ಯಾಟಿಂಗ್‌ 9) ಅವರು ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದರು.

ಇದಕ್ಕೂ ಮುನ್ನ 6 ವಿಕೆಟ್‌ಗಳಿಗೆ 305 ರನ್‌ಗಳಿಂದ ಶುಕ್ರವಾರ ಆಟ ಮುಂದುವರಿಸಿದ ದಿಮುತ್‌ ಕರುಣರತ್ನೆ ಬಳಗ ಮತ್ತೆ 50 ರನ್‌ಗಳನ್ನು ಸೇರಿಸಿ ಆಲೌಟಾಯಿತು. ಟಿಮ್‌ ಸೌಥಿ 64 ರನ್‌ಗಳಿಗೆ 5 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌ ಶ್ರೀಲಂಕಾ 92.4 ಓವರ್‌ಗಳಲ್ಲಿ 355 (ದಿಮುತ್‌ ಕರುಣರತ್ನೆ 50, ಕುಸಾಲ್‌ ಮೆಂಡಿಸ್‌ 87, ಏಂಜೆಲೊ ಮ್ಯಾಥ್ಯೂಸ್‌ 47, ದಿನೇಶ್‌ ಚಾಂಡಿಮಲ್‌ 39, ಧನಂಜಯ ಡಿಸಿಲ್ವಾ 46, ಟಿಮ್‌ ಸೌಥಿ 64ಕ್ಕೆ 5, ಮ್ಯಾಟ್‌ ಹೆನ್ರಿ 80ಕ್ಕೆ 4) ನ್ಯೂಜಿಲೆಂಡ್‌ 63 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 (ಟಾಮ್‌ ಲಥಾಮ್‌ 67, ಡೆವೊನ್‌ ಕಾನ್ವೆ 30, ಡೆರಿಲ್‌ ಮಿಚೆಲ್‌ ಬ್ಯಾಟಿಂಗ್‌ 40, ಅಸಿತಾ ಫೆರ್ನಾಂಡೊ 42ಕ್ಕೆ 2, ಲಾಹಿರು ಕುಮಾರ 34ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.