ADVERTISEMENT

ದೇಶಕ್ಕೆ ಮರಳಲು ಸುನೀಲ್‌ ಸುಬ್ರಮಣಿಯಮ್‌ಗೆ ಸೂಚನೆ

ಹೈಕಮಿಷನ್‌ ಅಧಿಕಾರಿಗಳ ಜೊತೆ ದುರ್ವರ್ತನೆ ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:45 IST
Last Updated 14 ಆಗಸ್ಟ್ 2019, 19:45 IST

ನವದೆಹಲಿ: ಕೆರೀಬಿಯನ್‌ ಹೈಕಮಿಷನ್‌ನಲ್ಲಿ ಹಿರಿಯ ಅಧಿಕಾರಿಗಳ ಜೊತೆ ದುರ್ವರ್ತನೆ ತೋರಿದರೆಂಬ ಕಾರಣಕ್ಕೆ ಭಾರತ ಕ್ರಿಕೆಟ್‌ ತಂಡದ ಆಡಳಿತಾತ್ಮಕ ಮ್ಯಾನೇಜರ್‌ ಸುನೀಲ್‌ ಸುಬ್ರಮಣಿಯಮ್‌ ಅವರನ್ನು ವೆಸ್ಟ್‌ ಇಂಡೀಸ್‌ ಪ್ರವಾಸದ ಮಧ್ಯದಲ್ಲೇ ದೇಶಕ್ಕೆ ಮರಳುವಂತೆ ಬಿಸಿಸಿಐ ಬುಧವಾರ ಸೂಚಿಸಿದೆ.

ಇಂಥ ಪ್ರಕರಣ ದೇಶದ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. ದೇಶಕ್ಕೆ ಬಂದ ಕೂಡಲೇ ಅವರು ಮುಂಬೈನಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಸಿಇಒ ರಾಹುಲ್‌ ಜೊಹ್ರಿ ಅವರ ಮುಂದೆ ಹಾಜರಾಗಿ ವಿವರಣೆ ನೀಡಬೇಕಾಗಿದೆ. ಐಎಫ್‌ಎಸ್‌ (ಭಾರತ ವಿದೇಶಾಂಗ ಸೇವೆ) ಅಧಿಕಾರಿಗಳ ಜೊತೆ ವರ್ತನೆಗೆ ಸಂಬಂಧಿಸಿದಂತೆ ಉತ್ತರ ಕೊಡಬೇಕಿದೆ.

ತಂಡದ ಆಡಳಿತಾತ್ಮಕ ಮ್ಯಾನೇಜರ್‌ ಹುದ್ದೆಗೆ ಅಂತಿಮಗೊಳಿಸಿದ ಪಟ್ಟಿಯಲ್ಲಿ ಸುನೀಲ್ ಸುಬ್ರಮಣಿಯಮ್‌ ಹೆಸರೂ ಇದೆ. ಆದರೆ ಅವರನ್ನು ಸಂದರ್ಶನಕ್ಕೆ ಕರೆಯಲಾಗುವುದೇ ಇಲ್ಲವೇ ಎಂಬುದು ಗೊತ್ತಾಗಿಲ್ಲ.

ADVERTISEMENT

ಗಯಾನಾ ಮತ್ತು ಟ್ರಿನಿಡಾಡ್‌ ಅಂಡ್‌ ಟೊಬ್ಯಾಗೊದಲ್ಲಿರುವ ಭಾರತೀಯ ಹೈಕಮಿಷನ್‌ ಅಧಿಕಾರಿಗಳ ಜೊತೆ ತೋರಿದರು ಎನ್ನಲಾದ ದುರ್ವರ್ತನೆಗೆ ಸಂಬಂಧಿಸಿ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ. ಆದರೆ ಈ ಪ್ರಕರಣದಿಂದ ಅವರ ಹುದ್ದೆಗೆ ಕುತ್ತು ಬರುವುದು ಖಚಿತವೆನ್ನಲಾಗುತ್ತಿದೆ. ಎಡಗೈ ಸ್ಪಿನ್ನರ್ ಆಗಿದ್ದ ಸುಬ್ರಮಣಿಯಮ್‌ ಅವರು ತಮಿಳುನಾಡು ತಂಡದ ಪರ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.

ಈ ನಡುವೆ ಸುಬ್ರಮಣಿಯನ್‌ ಅವರು ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳು ಮಾಡಿದ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳಿವೆ. 52 ವರ್ಷದ ಸುಬ್ರಮಣಿಯಮ್‌ ಅವರು 74 ಪ್ರಥಮ ದರ್ಜೆ ಪಂದ್ಯಗಳಿಂದ 285 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.