ADVERTISEMENT

ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು: ಸುಪ್ರೀಂ ಕೋರ್ಟ್

ಪಿಟಿಐ
Published 4 ಫೆಬ್ರುವರಿ 2026, 2:35 IST
Last Updated 4 ಫೆಬ್ರುವರಿ 2026, 2:35 IST
   

ನವದೆಹಲಿ: ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು. ಮಾಜಿ ಆಟಗಾರರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕ್ರೀಡಾ ಸಂಸ್ಥೆಗಳನ್ನು ಕ್ರೀಡೆಯಲ್ಲಿ ಅನುಭವ ಇರುವವರೇ ಮುನ್ನಡೆಸಬೇಕು ಎಂದು ಸಿಜೆಐ ಸೂರ್ಯ ಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.

ಜ.6ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ಚುನಾವಣೆಯಲ್ಲಿ ಸ್ವಜನಪಕ್ಷಪಾತವಾಗುತ್ತಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಸದಸ್ಯರ ಸೇರ್ಪಡೆಯಾಗಿದೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕ ಕೇದಾರ್ ಜಾಧವ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ನ್ಯಾಯಾಲಯವು, ಎಂಸಿಎ ಚುನಾವಣೆಗೆ ತಡೆ ನೀಡಿತ್ತು.

ADVERTISEMENT

ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಎಂಸಿಎ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ವೇಳೆ ‘1986 ರಿಂದ 2023ರ ನಡುವೆ ಎಂಸಿಎ ಅಲ್ಲಿ 164 ಸದಸ್ಯರಿದ್ದರು. ಇತ್ತೀಚೆಗೆ ಒಂದೇ ಸಮನೆ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು ಏಕೆ ?’ ಎಂದು ಸಿಜೆಐ ಸೂರ್ಯ ಕಾಂತ್ ಅವರು ಪ್ರಶ್ನಿಸಿದ್ದಾರೆ.

ಒಂದು ವೇಳೆ ಎಂಸಿಎ ತನ್ನ ಸದಸ್ಯರ ಸಂಖ್ಯೆಯನ್ನು 300ಕ್ಕೆ ಏರಿಸಲು ಬಯಸಿದ್ದರೆ, ಆ ಸ್ಥಾನಗಳನ್ನು ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದವರಿಗೆ ಮತ್ತು ಮಾಜಿ ಅಂತರರಾಷ್ಟ್ರೀಯ ಆಟಗಾರರಿಗೆ ಮೀಸಲಿಡಬೇಕು. ಆಟದ ಗಂಧಗಾಳಿ ಗೊತ್ತಿಲ್ಲದವರಿಗಲ್ಲ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್‌ ಉಳಿದುಕೊಂಡಿರುವುದು ಆಟಗಾರರಿಂದಲೇ ಹೊರತು ಅಧಿಕಾರಿಗಳಿಂದಲ್ಲ. ಹಾಕಿ ಆಡಳಿತವು ತನ್ನ ಘನತೆಯನ್ನು ಉಳಿಸಿಕೊಂಡಿರುವುದೇ ಅದರ ಆಡಳಿತದಲ್ಲಿ ಅನುಭವವಿರುವವರು ಇರುವುದರಿಂದ ಎಂದು ಹೇಳಿದ್ದಾರೆ.

ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿರುವ ಪೀಠವು, ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯ ವೇಳೆ ತಮ್ಮ ವಾದವನ್ನು ಮಂಡಿಸುವಂತೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.